ರಾಯಚೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ನಾನಾ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಹೀಗಾಗಿ ರಾಯಚೂರಿನಲ್ಲಿ ಮಹಿಳೆಯರು ಹಾಗೂ ಸಾರ್ವಜನಿಕರು ಪರದಾಟ ನಡೆಸಿದ್ದಾರೆ.
ಬೆಳಗ್ಗೆಯಿಂದ ಸಂಜೆಯವರೆಗೆ ಕಾದು ನಿಂತರೂ ನೋಂದಣಿ ಮಾಡಿಸಲು ಆಗದೆ ಮಹಿಳೆಯರು ಮನೆಗಳಿಗೆ ಮರಳಿದ್ದಾರೆ. ಇಲ್ಲಿನ ಕರ್ನಾಟಕ ಒನ್ ಸೇರಿದಂತೆ ನೋಂದಣಿ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆಯ ಜೊತೆಗೆ ಪಡಿತರ ಚೀಟಿ ಕೆವೈಸಿ ಸಮಸ್ಯೆ, ಮನೆ ಯಜಮಾನಿ ಮೊಬೈಲ್ ಸಂಖ್ಯೆ ಜೋಡಣೆ, ಒಟಿಪಿ ಬಾರದೆ ಇರುವುದು ಸೇರಿದಂತೆ ನಾನಾ ಸಮಸ್ಯೆಗಳಿಂದ ನೋಂದಣಿ ಮಾಡಿಸಲು ಆಗುತ್ತಿಲ್ಲ. ಸರ್ವರ್ ಸರಿಹೋದರು ನೋಂದಣಿ ಕಾರ್ಯ ಪೂರ್ಣಗೊಳ್ಳುತ್ತಿಲ್ಲ.
ಕರ್ನಾಟಕ ಒನ್ ಸೆಂಟರ್ನಲ್ಲಿ ಬೆಳಗ್ಗೆಯಿಂದ ಕೇವಲ 30 ನೋಂದಣಿಯಾಗಿದೆ. ಹೀಗಾಗಿ ಮಹಿಳೆಯರು ಪ್ರತಿದಿನ ಬಿಸಿಲಲ್ಲೇ ಗಂಟೆಗಟ್ಟಲೆ ಕಾಯುತ್ತಾ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ.