ಬೆಂಗಳೂರು: ಮುಡಾ ಹಗರಣದಲ್ಲಿ ಸಿಲುಕಿಕೊಂಡಿರುವ ಸಿಎಂ ಸಿದ್ದರಾಮಯ್ಯ ಪರವಾಗಿ ಹೋರಾಟ ಮಾಡಲು ಜನರನ್ನು ಕರೆತರಲು ಈಗ ಬೆದರಿಕೆಯ ತಂತ್ರಕ್ಕೆ ಮೊರೆ ಹೋಗಲಾಗಿದೆ. ಪ್ರತಿಭಟನೆಗೆ ಬರದೇ ಹೋದರೆ ಉಚಿತ ಗ್ಯಾರಂಟಿ ಯೋಜನೆ ಕಟ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.
ನಂಜನಗೂಡಿನಲ್ಲಿ ಗ್ರಾಮಸ್ಥರಿಗೆ ಈ ರೀತಿ ಡಂಗೂರ ಸಾರಿ ಪ್ರತಿಭಟನೆಗೆ ಬರಲು ಒತ್ತಾಯ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಮುಡಾ ಹಗರಣ ವಿಚಾರದಲ್ಲಿ ತನಿಖೆಗೆ ಅನುಮತಿ ನೀಡುತ್ತಿದ್ದಂತೇ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಬೆಂಬಲಿಗರಿಂದ ಭಾರೀ ಪ್ರತಿಭಟನೆ ನಡೆಯುತ್ತಿದೆ.
ನಿನ್ನೆ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ನಾವು ಗಾಂಧಿ ಮಾರ್ಗದಲ್ಲಿ ಜಿಲ್ಲಾವಾರು ಕೇಂದ್ರಗಳಲ್ಲಿ ಹಿಂಸಾಚಾರವಿಲ್ಲದೇ ಪ್ರತಿಭಟನೆ ಮಾಡುವುದಾಗಿ ಡಿಕೆಶಿ ಹೇಳಿಕೊಂಡಿದ್ದರು. ಆದರೆ ಈಗ ಪ್ರತಿಭಟನೆಗೆ ಬರಲು ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ನಂಜನಗೂಡಿನ ಚಿನ್ನದಗುಡಿಹುಂಡಿ ಗ್ರಾಮದಲ್ಲಿ ಸಿದ್ದರಾಮಯ್ಯ ಪರ ಪ್ರತಿಭಟನೆಗೆ ಬರದೇ ಇದ್ದರೆ ಉಚಿತ ವಿದ್ಯುತ್, ಅಕ್ಕಿ ದುಡ್ಡು ಸೇರಿದಂತೆ ಗ್ಯಾರಂಟಿ ಹಣ ಕಟ್ ಮಾಡುವುದಾಗಿ ಬೆದರಿಕೆ ಹಾಕಿ ಡಂಗೂರ ಸಾರಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.