ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿಯವರನ್ನು ಭೇಟಿ ಮಾಡಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ವಿಶ್ವನಾಥ್ ಮತ್ತು ತಾವು ಅವರು ಕಳೆದ ನಲವತ್ತು ವರ್ಷಗಳಿಂದ ಸ್ನೇಹಿತರು. ನಮ್ಮ ಮನೆಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷದವರು ಬರುತ್ತಾರೆ. ಅದರಲ್ಲಿ ವಿಶೇಷ ಏನಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದ ಲಕ್ಕಸಂದ್ರದ ತಮ್ಮ ನಿವಾಸದಲ್ಲಿ ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಭೇಟಿಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಶ್ವನಾಥ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರೋ ವಿಚಾರ ನಮಗೆ ಸಂಬಂದಿಸಿದ್ದಲ್ಲ. ಅದು ಅವರ ಪಕ್ಷದ ಅಂತರಿಕ ವಿಚಾರ ಎಂದರು.
ವಿಶ್ವನಾಥ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ ಮಾಡ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅದಕ್ಕೆ ಪಕ್ಷದ ಅಧ್ಯಕ್ಷರಿದ್ದಾರೆ. ಅವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು. ನಾನು ಸಚಿವ ಸ್ಥಾನ ಕೊಡುವಂತೆ ಯಾರ ಮನೆ ಬಾಗಿಲಿಗೂ ಹೋಗಿ ಕೇಳಲ್ಲ. ಸಚಿವ ಸ್ಥಾನದ ಆಸೆ ನನಗೆ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸಚಿವ ಸ್ಥಾನ ನೀಡುವಲ್ಲಿ ತಾರತಮ್ಯ ಅಗಿದೆ ಎಂದು ಮಾತನಾಡಿದ್ದೇನೆ ಅಷ್ಟೇ. ಆದರೆ ನಾನಂತೂ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ರೋಷನ್ ಬೇಗ್ ಅಮಾನತು ವಿಚಾರದ ಬಗ್ಗೆ ನಾನು ಮಾತಾಡಲ್ಲ ಎಂದ ರೆಡ್ಡಿ, ಮಾಜಿ ಸಿಎಂ ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ್ ಎಲ್ಲರೂ ದೆಹಲಿಗೆ ಹೋಗಿದ್ದು ಯಾಕೆ ಅಂತಾ ಗೊತ್ತಿಲ್ಲ ಎಂದರು.
ಬಳ್ಳಾರಿ ಗಣಿಗಾರಿಕೆ ವಿಚಾರಕ್ಕೂ, ಜಿಂದಾಲ್ ವಿಚಾರಕ್ಕೂ ಹೋಲಿಕೆ ಸರಿಯಲ್ಲ. ಈ ವಿಚಾರ ನನಗಿಂತ ಎಚ್.ಕೆ. ಪಾಟೀಲ್ ಅವರಿಗೆ ಚೆನ್ನಾಗಿ ಗೊತ್ತು. ನೀವು ಅವರನ್ನೇ ಕೇಳುವುದು ಉತ್ತಮ. ಈ ವಿಚಾರ ಎಲ್ಲ ಗೊತ್ತಿರುವುದಕ್ಕೆ ನಾನೇನು ಕ್ಯಾಬಿನೆಟ್ ನಲ್ಲಿ ಇಲ್ಲ ಎಂದು ಹೇಳಿದರು.