ಬಿಜೆಪಿಯವರು ಮಾಡದಿದ್ದರೆ ನಾವು ಅಧಿಕಾರಕ್ಕೆ ಬಂದಾಗ 7ನೇ ವೇತನ ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ಘೋಷಿಸಿದೆ. 7ನೇ ವೇತನ ಆಯೋಗದ ಮಧ್ಯಂತರ ಜಾರಿಗೆ ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಿದ ಹಿನ್ನೆಲೆ ಸರ್ಕಾರ ಶೇಕಡಾ 17ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಒಪ್ಪಿಗೆ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಮಧ್ಯೆ ಬೆಳಗಾವಿಯಲ್ಲಿಂದು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಒಂದು ವೇಳೆ ಬಿಜೆಪಿಯವರು ಮಾಡದೇ ಇದ್ದರೆ, ನಾವು ಅಧಿಕಾರಕ್ಕೆ ಬಂದು 7ನೇ ವೇತನ ಆಯೋಗ ವರದಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಹಾಸನದಲ್ಲಿ ಈ ಕುರಿತು ಮಾತನಾಡಿದ್ದಾರೆ. ನಾವು ಸರ್ಕಾರಿ ನೌಕರರ ಪರವಾಗಿ ಇದ್ದೇವೆ. ಕಾಂಗ್ರೆಸ್ ಖಂಡಿತ ಅಧಿಕಾರಕ್ಕೆ ಬರುತ್ತೆ, ಯಾರಿಗೂ ಅನುಮಾನ ಬೇಡ. ನಾವು ಅಧಿಕಾರಕ್ಕೆ ಬಂದ ಕೂಡಲೇ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಏಳನೇ ವೇತನ ಆಯೋಗ ಜಾರಿ ಮಾಡಲು ನಮ್ಮ ಪಕ್ಷ ಬದ್ಧವಾಗಿದೆ. ಇದೊಂದು ಭ್ರಷ್ಟ ಸರ್ಕಾರ, ಎಲ್ಲ ಕಡೆಯೂ ಭ್ರಷ್ಟಾಚಾರ ಹೆಚ್ಚಾಗಿದೆ. ಹೋರಾಟ ನಿಮ್ಮ ಹಕ್ಕು, ನೌಕರರು ಕೇಳುತ್ತಿರುವುದು ಸರಿಯಾಗಿದೆ ಎಂದು ಹೇಳಿದರು.