ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರು ದೇಶದ ಪ್ರಧಾನಿಯಾದ ನಂತರ ೧೯೬೫ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದಂತಹ ವಿಷಮ ಪರಸ್ಥಿತಿಯಲ್ಲಿಯೂ ದೇಶವನ್ನು ಸಮರ್ಪಕವಾಗಿ ಮುನ್ನಡೆಸಿದ ಮಹಾನ್ ನಾಯಕರು. ಶಾಸ್ತ್ರೀಯವರ ಕಾಲದಲ್ಲಿ ದೇಶದಲ್ಲಿ ಉಂಟಾಗಿರುವ ಆಹಾರದ ಅಭಾವ, ನಿರುದ್ಯೋಗ ಹಾಗೂ ಬಡತನದಂತಹ ಸಮಸ್ಯೆಗಳನ್ನು ನಿವಾರಿಸಲು ಅವರು ರೂಪಿಸಿದ ಕಾರ್ಯತಂತ್ರದ ಫಲವಾಗಿ ದೇಶದಲ್ಲಿ "ಹಸಿರು ಕ್ರಾಂತಿ" ಹಾಗೂ "ಕ್ಷೀರ ಕ್ರಾಂತಿ"ಗೆ ನಾಂದಿಯಾಯಿತು.
ಲಾಲ್ ಬಹದ್ದೂರ್ ಶಾಸ್ತ್ರಿಯವರು, ದೇಶದ ಗಡಿ ಕಾಯುವ ವೀರ ಯೋಧರ ಬಗ್ಗೆ ಹಾಗೂ ನಮಗೆ ಅನ್ನ ನೀಡುವ , ದೇಶದ ಬೆನ್ನೆಲುಬಾಗಿರುವ ರೈತರ ಬಗ್ಗೆ ವಿಶೇಷ ಕಾಳಜಿ ವಹಿಸಿ, ದೇಶಾದ್ಯಂತ "ಜೈ ಜವಾನ್ ಜೈ ಕಿಸಾನ್" ಎಂಬ ಘೋಷ ವಾಕ್ಯವನ್ನು ಮೊಳಗಿಸಿದರು. ಇಂತಹ ಮಹಾನ್ ನಾಯಕನ ಜನ್ಮ ದಿನವನ್ನು ಆಚರಿಸಲಾಯಿತು.
ಅಹಿಂಸಾ ಮಾರ್ಗದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾತ್ಮ ಗಾಂಧೀಜಿ ಅವರು, ವಿಶ್ವಕ್ಕೆ ಶಾಂತಿ ಮಂತ್ರವನ್ನು ಹೇಳಿಕೊಟ್ಟು, ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಡುವ ಮೂಲಕ ಜಗದ್ವಿಖ್ಯಾತಿಯನ್ನು ಪಡೆದ ಮಹಾನ್ ಮಾನವತಾವಾದಿಯಾದ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮ ದಿನವಾದ ಇಂದು ಅವರನ್ನು ಹೃದಯ ಪೂರ್ವಕವಾಗಿ ಸ್ಮರಿಸಲಾಯಿತು.ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನವಾದ ಅಕ್ಟೋಬರ್ ೨ ರಂದು ವಿಶ್ವಸಂಸ್ಥೆ "ವಿಶ್ವ ಅಹಿಂಸಾ ದಿನ"ವಾಗಿ ಆಚರಿಸುತ್ತಿದೆ. ಈ ದಿನದಂದು ನಾವು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಹಾಕಿಕೊಟ್ಟಿರುವ ಅಹಿಂಸಾ ಮಾರ್ಗ ಮತ್ತು ಅವರ ತತ್ವ ಆದರ್ಶಗಳನ್ನು, ಸಿದ್ಧಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸನ್ಮಾರ್ಗದಲ್ಲಿ ಸಾಗುವ ಸಂಕಲ್ಪಮಾಡುವ ಮೂಲಕ ಅವರ ಜನ್ಮ ದಿನಾಚರಣೆಗೆ ಒಂದು ಅರ್ಥ ಕಲ್ಪಿಸಬೇಕಿದೆ. ಇಡೀ ವಿಶ್ವಕ್ಕೆ ಶಾಂತಿಯ ಪಾಠವನ್ನು ಪಠಿಸಿದವರು ಮಹಾತ್ಮ ಗಾಂಧೀಜಿಯವರು ಎಂದು ಮಂಡಲ ಅಧ್ಯಕ್ಷ ಬಿ.ಎಸ್. ಪಂಚಾಕ್ಷರಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಶಿಕ್ಷಣ ಪ್ರಕೋಷ್ಠ ಜಿಲ್ಲಾ ಸಂಚಾಲಕ ಎಚ್.ಟಿ. ಬೈರಪ್ಪ, ಹಾಲು ಉತ್ಪನ್ನ ಪ್ರಕೋಷ್ಠ ಜಿಲ್ಲಾ ಸಂಚಾಲಕ ಸಿದ್ದರಾಮಣ್ಣ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್, ಗಂಗಣ್ಣ, ಯುವ ಮೋರ್ಚಾ ಅಧ್ಯಕ್ಷ ಭರತ್, ಎಸ್.ಟಿ. ಮೋರ್ಚಾ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಬಕರು ಹುಕುಂ ಸದಸ್ಯರಾದ ಚಂದ್ರ ಮೌಳಿ, ಸವಿತಾ, ಮುಖಂಡರಾದ ಬೆಟ್ಟಸ್ವಾಮಿ, ಚಂದ್ರಶೇಖರ್ ಬಾಬು, ಎಸ್.ಡಿ. ದಿಲೀಪ್ ಕುಮಾರ್, ಕೆ.ಬಿ ಕೃಷ್ಣಪ್ಪ, ಅನಿಲ್, ಅರ್ಜುನ್ ಇದ್ದರು