ಹಾಸನದಲ್ಲಿ ಟ್ರಕ್ ದುರಂತಕ್ಕೆ ಕುಮಾರಸ್ವಾಮಿ ಮನಸ್ಸು ವಿಲ ವಿಲ: ಓಡೋಡಿ ಬಂದ ನಿಖಿಲ್ ಕುಮಾರ್

Krishnaveni K

ಶನಿವಾರ, 13 ಸೆಪ್ಟಂಬರ್ 2025 (09:17 IST)
ಹಾಸನ: ಗಣೇಶ ಮೆರವಣಿಗೆ ವೇಳೆ ಹಾಸನದಲ್ಲಿ ನಡೆದ ಟ್ರಕ್ ದುರಂತದಲ್ಲಿ 9 ಜನ ಸಾವನ್ನಪ್ಪಿದ್ದು 25 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದು ಪುತ್ರ ನಿಖಿಲ್ ಕುಮಾರ್ ರಾತ್ರೋ ರಾತ್ರಿ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ.

ಘಟನೆಗೆ ಆಘಾತ ವ್ಯಕ್ತಪಡಿಸಿರುವ ಎಚ್ ಡಿ ಕುಮಾರಸ್ವಾಮಿ ‘ಹಾಸನ ತಾಲೂಕಿನ ಮೊಸಳೆಹೊಸಳ್ಳಿಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಭೀಕರ ಅಪಘಾತ ಸಂಭವಿಸಿ ಹಲವರು ಜೀವ ಕಳೆದುಕೊಂಡು, 20ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು. ಗಣಪತಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಟ್ರಕ್‌ ಹರಿದು ಭಕ್ತರ ಸಾವುಂಟಾಗಿರುವುದು ನನಗೆ ಅತ್ಯಂತ ದುಃಖ ಉಂಟು ಮಾಡಿದೆ. ಇದು ಅತೀ ದುರ್ದೈವದ ಘಟನೆಯಾಗಿದ್ದು, ಮೃತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ ಹಾಗೂ ದುಃಖತಪ್ತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ. ಎಲ್ಲಾ ಗಾಯಾಳುಗಳು ಅದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರಕಾರ ಗಾಯಾಳುಗಳಿಗೆ ಉತ್ತಮ, ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ರಾತ್ರಿಯೇ ನಿಖಿಲ್ ಕುಮಾರಸ್ವಾಮಿ ಬಂದಿದ್ದು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಗಣೇಶ ವಿಸರ್ಜನಾ ಸಂಭ್ರಮದಲ್ಲಿ ಈ ರೀತಿಯ ಆಘಾತವುಂಟಾಗಿರುವುದು ದುಃಖದ ವಿಚಾರ. ಆದಷ್ಟು ಬೇಗ ಎಲ್ಲರೂ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಈ ಸಂದರ್ಭದಲ್ಲಿ ನನ್ನ ಕೈಲಾದ ನೆರವನ್ನು ನೊಂದ ಕುಟುಂಬಕ್ಕೆ ನೀಡುತ್ತೇನೆ ಎಂದು ಧೈರ್ಯ ತುಂಬಿದೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ