ಬೆಂಗಳೂರು: ಕಾಂಗ್ರೆಸ್ ಎಸಗಿರುವ ಭ್ರಷ್ಟಾಚಾರ ನೋಡಿದರೆ, ನಾಳೆ ಚುನಾವಣೆ ನಡೆದರೂ, ಜನ ಕಾಂಗ್ರೆಸ್ ಅನ್ನು ಮನೆಗೆ ಕಳುಹಿಸುತ್ತಾರೆ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಡಿಕೆಶಿ ಹೇಳಿಕೆಗೆ ಕೌಂಟರ್ ನೀಡಿದ್ದಾರೆ.
ಸದ್ಯ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮಧ್ಯೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡಿದರ ಬಗ್ಗೆ ವಾಕ್ಸಮರ ಜೋರಾಗಿ ನಡೆಯುತ್ತಿದೆ.
ನಾವು ಅಧಿಕಾರಕ್ಕೆ ಬಂದ್ಮೇಲೆ ಮತ್ತೇ ರಾಮನಗರ ಜಿಲ್ಲೆಯನ್ನಾಗಿ ಮಾಡುವುದಾಗಿ ಹೇಳಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಡಿಸಿಎಂ ಶಿವಕುಮಾರ್ ಕೌಂಟರ್ ಕೊಟ್ಟು ಮುಂದಿನ 10 ವರ್ಷ ನಾವೇ ಅಧಿಕಾರಕ್ಕೆ ಬರುತ್ತೇವೆ. ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರು ಬದಲಾವಣೆ ಮಾಡಲು ಕುಮಾರಸ್ವಾಮಿ ಹಣೆಯಲ್ಲಿ ಬರೆದಿಲ್ಲ ಎಂದು ಡಿಕೆಶಿ ಕೌಂಟರ್ ನೀಡಿದ್ದರು.
ಈ ಸಂಬಂಧ ಪ್ರತಿಕ್ರಿಯಿಸಿದ ಎಚ್ ಡಿ ಕುಮಾರಸ್ವಾಮಿ ಅವರು, ಕಾಂಗ್ರೆಸ್ ನಾಯಕರು ಮಾಡಿದ ಭ್ರಷ್ಟಚಾರ ನೋಡಿದರೆ, ನಾಳೆ ಚುನಾವಣೆ ನಡೆದರು ಕಾಂಗ್ರೆಸ್ ಮನೆಗೆ ಹೋಗುತ್ತದೆ. ಈ ಹಿಂದೆಯೂ ತುಂಬಾ ಜನ ನಾವೇ ಸರ್ಕಾರ ರಚಿಸುತ್ತೇವೆ ಎಂಬುದಾಗಿ ಹೇಳಿದ್ದಾರೆ. ಹಾಗೇ ಹೇಳಿದವರು ಒಂದೇ ವರ್ಷಕ್ಕೆ ಮನೆಗೆ ಹೋಗಿದ್ದಾರೆ. ಇಲ್ಲಿ ಗೂಟ ಹೊಡೆದುಕೊಂಡು ಇರುತ್ತಾರೋ, ಇನ್ನೆಲ್ಲಿ ಇರುತ್ತಾರೋ ಎಂಬುದರ ಬಗ್ಗೆ ಮುಂದೆ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ ಹೇಳಿದರು.
ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ್ದ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಾಯಶ್ಚಿತ ಪಡುತ್ತಾರೆ ಎಂದರು.