ಕಳೆದ ರಾತ್ರಿಯಿಂದ ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ 6 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಧ್ಯರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ವೆಲ್ಲೂರು, ರಾಣಿಪೇಟ್ ಮತ್ತು ಚೆಂಗಲ್‌ಪೇಟೆ ಜಿಲ್ಲಾಧಿಕಾರಿಗಳು ಸೋಮವಾರ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಭಾರೀ ಮಳೆ ಮತ್ತು ಮಳೆಯ ಮುನ್ಸೂಚನೆಯಿಂದಾಗಿ, ತಿರುವಳ್ಳೂರು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿರುವಳ್ಳೂರಿನ ಜಿಲ್ಲಾಧಿಕಾರಿ ಕಚೇರಿಯ ಟಿಪ್ಪಣಿಯಲ್ಲಿ ತಿಳಿಸಲಾಗಿದೆ. ಚೆನ್ನೈ, ತಿರುವಳ್ಳೂರು, ಚೆಂಗಲ್‌ಪೇಟ್, ಕಾಂಚೀಪುರಂ, ರಾಣಿಪೇಟ್, ತಿರುಪತ್ತೂರ್, ತಿರುವಣ್ಣಾಮಲೈ, ವಿಲ್ಲುಪುರಂ, ಕಡಲೂರು ಮತ್ತು ಕಲ್ಲಕುರಿಚಿ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಭಾರೀ ಮಳೆಯಿಂದಾಗಿ ಚೆನ್ನೈಗೆ ತೆರಳುತ್ತಿದ್ದ ಆರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳನ್ನು ಬೆಂಗಳೂರಿಗೆ ತಿರುಗಿಸಲಾಗಿದೆ. ಮಳೆಯಿಂದಾಗಿ 12ಕ್ಕಿಂತಲೂ ಅಧಿಕ ಅಂತರಾಷ್ಟ್ರೀಯ ವಿಮಾನಗಳ ನಿರ್ಗಮನದಲ್ಲಿ ವಿಳಂಬವಾಯಿತು. ಚೆನ್ನೈನ ಮೀನಂಬಾಕ್ಕಂನಲ್ಲಿ ಮುಂಜಾನೆ 5.30ರವರೆಗೆ 13.7 ಸೆಂ.ಮೀ ಮಳೆಯಾಗಿದೆ.