ರಾಜ್ಯದ ಹಲವೆಡೆ ಭಾರೀ ಮಳೆ : ಮನೆಗಳ ಕುಸಿತ

ಗುರುವಾರ, 22 ಜುಲೈ 2021 (08:08 IST)
ಬೆಂಗಳೂರು (ಜು.22):  ರಾಜ್ಯದೆಲ್ಲೆಡೆ ಬುಧವಾರವೂ ವರ್ಷಧಾರೆ ಮುಂದುವರೆದಿದೆ. ಕೆಲವು ಜಿಲ್ಲೆಗಳಲ್ಲಿ ಜೋರು ಮಳೆಯಾಗಿದ್ದರೆ, ಹಲವೆಡೆ ಇಡೀ ದಿನ ಜಿಟಿ ಜಿಟಿ ಮಳೆ ಆಗಿದೆ.
 


•             ರಾಜ್ಯದೆಲ್ಲೆಡೆ ಬುಧವಾರವೂ ವರ್ಷಧಾರೆ ಮುಂದುವರೆದಿದೆ
•             ಕೆಲವು ಜಿಲ್ಲೆಗಳಲ್ಲಿ ಜೋರು ಮಳೆಯಾಗಿದ್ದರೆ, ಹಲವೆಡೆ ಇಡೀ ದಿನ ಜಿಟಿ ಜಿಟಿ ಮಳೆ
•             ಧಾರಾಕಾರ ಮಳೆಯಿಂದ ಮನೆಗಳ ಕುಸಿತ, ನದಿಗಳ ನೀರಿನ ಮಟ್ಟ ಏರಿಕೆ

ದಿನವಿಡೀ ಮೋಡಕವಿದ ವಾತಾವರಣವಿದ್ದ ಕಾರಣ ಚಳಿ ಹೆಚ್ಚಾಗಿತ್ತು. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕುಮಾರಚಿಂಚೋಳಿಯಲ್ಲಿ ಮಳೆಯ ಆರ್ಭಟಕ್ಕೆ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಲೂಕಿನ ವಿವಿಧೆಡೆ 10ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದ ವರದಿಯಾಗಿದೆ. ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.
ಅಂಕೋಲಾದಲ್ಲಿ ವರುಣನ ಅಬ್ಬರ: 9 ಗ್ರಾಮಗಳಿಗೆ ಜಲ ದಿಗ್ಬಂಧನ
ಜತೆಗೆ ಬೆಳಗಾವಿ ಜಿಲ್ಲೆಯಲ್ಲಿಯೂ ಕಳೆದ ಮಧ್ಯರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಜಿಲೆಯಲ್ಲಿನ ನದಿಗಳಿಗೂ ಸಾಕಷ್ಟುನೀರು ಹರಿದು ಬರುತ್ತಿದೆ. ವಿಜಯಪುರ ಜಿಲ್ಲೆಯಲ್ಲಿರುವ ಆಲಮಟ್ಟಿಮತ್ತು ಬಾಗಲಕೋಟೆ ಜಿಲ್ಲೆಯಲ್ಲಿರುವ ಹಿಪ್ಪರಗಿ ಜಲಾಶಯಕ್ಕೂ ಸಾಕಷ್ಟುಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದ.ಕನ್ನಡ, ಉಡುಪಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವೆಡೆ ಜಡಿ ಮಳೆ, ಶೀತಗಾಳಿ ಮುಂದುವರೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ