ಸಿಎಂ ಸಿದ್ದರಾಮಯ್ಯನವರ ಐತಿಹಾಸಿಕ ಸಾಧನೆ

ಶನಿವಾರ, 25 ಮಾರ್ಚ್ 2017 (10:52 IST)
ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ನಿನ್ನೆ ವಿಧಾನಸಭೆಯಲ್ಲಿ ಐತಿಹಾಸಿಕ ಮಸೂದೆಯೊಂದಕ್ಕೆ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದೊಡ್ಡಿ, ಪಾಳ್ಯ, ಹಟ್ಟಿ, ತಾಂಡಾ ಮತ್ತು ಕ್ಯಾಂಪ್`ಗಳಲ್ಲಿ ವಾಸಿಸುತ್ತಿರುವ ಜನರಿಗೆ ಸಿಎಂ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಇಂತಹ ದಾಖಲೆ ಇಲ್ಲದ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವವರ ಹೆಸರಿಗೇ ಮನೆ ನೋಂದಣಿ ಮಾಡಿಕೊಡುವ ಮಹತ್ವ ಭೂಸುಧಾರಣಾ ಅಧಿನಿಯಮ ಅಂಗೀಕಾರವಾಗಿದೆ.

ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸ್ವಾತಂತ್ರ್ಯಾನಂತರ ನಂತರ ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ಬಂದಿತ್ತು. ನಾವು ವಾಸಿಸುವನೇ ಮನೆಯ ಒಡೆಯ ಯೋಜನೆ ಜಾರಿಗೆ ತಂದಿದ್ದೇವೆ. ಈ ಮೂಲಕ ಪ್ರಣಾಳಿಕೆಯಲ್ಲಿ ನೀಡಿದ ಬಹುದೊಡ್ಡ ಭರವಸೆಯನ್ನ ಈಡೇರಿಸಲಾಗಿದೆ ಎಂದು ತಿಳಿಸಿದರು.

ಸದನದಲ್ಲಿ ಮಂಡನೆಯಾದ ಈ ಐತಿಹಾಸಿಕ ಕಾಯ್ದೆಗೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲರೂ ಪಕ್ಷ ಭೇದ ಮರೆತು ಒಮ್ಮತ ಸೂಚಿಸಿದರು. ಧ್ವನಿಮತದ ಮೂಲಕ ಐತಿಹಾಸಿಕ ಕಾಯ್ದೆಯನ್ನ ಅಂಗೀಕರಿಸಲಾಗಿದೆ.

ಈ ಮೂಲಕ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿರುವ ಗೊಲ್ಲರಹಟ್ಟಿ, ಕುರುಬರಹಟ್ಟಿ, ವಡ್ಡರಹಟ್ಟಿ, ಲಂಬಾಣಿ ತಾಂಡಾ, ನಾಯಕರ ಹಟ್ಟಿ, ಪಂಜಾರೆ, ದೊಡ್ಡಿ ಜನರು ತಾವು ವಾಸಿಸುತ್ತಿರುವ ಮನೆಗಳ ಹಕ್ಕು ಪತ್ರ ಪಡೆದು ತಾವು ವಾಸಿಸುವ ಮನೆಯ ಒಡೆಯರಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ