ಸರಿಯಾದ ಚಿಕಿತ್ಸೆ ಸಿಗದೆ ಯುವಕನೋರ್ವ ಸಾವನಪ್ಪಿರುವ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಾಸರಹಳ್ಳಿ ಬಳಿ ಇರುವ ಮಧು ಸೂಪರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೇಲೆ ಯುವಕನ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸತೀಶ್ ಸಾವನಪ್ಪಿರುವ ಯುವಕ. 9ನೇ ತಾರೀಖು ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದ ಸತೀಶ್ ಮತ್ತು ಸ್ನೇಹಿತರ ನಡುವ ಗಲಾಟೆಯಾಗಿದೆ. ಬಳಿಕ ಸತೀಶ್ ಎಡಗೈಗೆ ಗಾಯವಾಗಿತ್ತು.
ಕೂಡಲೆ ಸ್ಥಳೀಯ ಮಧು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಎರಡು ದಿನ ಯಾವುದೇ ಚಿಕಿತ್ಸೆ ನೀಡಿಲ್ಲ. ಕೇವಲ ಬ್ಯಾಂಡೇಜ್ ಸುತ್ತಿದ್ದಾರಂತೆ. 50 ಸಾವಿರಕ್ಕೂ ಹೆಚ್ಚು ಹಣವನ್ನು ಆಸ್ಪತ್ರೆಯವರು ಕಟ್ಟಿಸಿಕೊಂಡಿದ್ದರಂತೆ. ನಿನ್ನೆ ಸಂಜೆ ಸತೀಶ್ ತೀವ್ರ ರಕ್ತಸ್ರಾವವಾಗಿ ಸಾವನಪ್ಪಿದ್ದಾನೆ. ಇದಕ್ಕೆ ರೊಚ್ಚಿಗೆದ್ದ ಮೃತನ ಮನೆಯವರು, ಆಸ್ಪತ್ರೆಯ ಬಳಿ ತೆರಳಿ ಗಲಾಟೆ ಮಾಡಿದ್ದಾರೆ. ಯುವಕನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕೂಡಲೇ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಗೋವಿಂದರಾಜನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.