ಗೃಹ ಸಚಿವ ಜಿ.ಪರಮೇಶ್ವರ್ ಕೂಡಲೇ ರಾಜೀನಾಮೆ ನೀಡಬೇಕು: ಬಸವರಾಜ್ ಹೊರಟ್ಟಿ

ಭಾನುವಾರ, 31 ಜುಲೈ 2016 (12:58 IST)
ಧಾರವಾಡ ಪೊಲೀಸರಿಂದ ಮಹದಾಯಿ ಹೋರಾಟಗಾರರ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್‌ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಆಗ್ರಹಿಸಿದ್ದಾರೆ.
 
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೊಲೀಸರಿಂದ ಹೋರಾಟಗಾರರು, ಮಹಿಳೆಯರು ಹಾಗೂ ಮಕ್ಕಳ ಮೇಲೆ ಅಮಾನವೀಯ ಹಲ್ಲೆಗೆ ಸಂಬಂಧಿಸಿದಂತೆ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ರಾಜ್ಯ ಸರಕಾರ ಮಾನಮೀಯತೆ ಮರೆಯುತ್ತಿದೆ ಎಂದು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
 
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರು ಗ್ರಾಮದಲ್ಲಿ ಅಮಾಯಕರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂದಿಸಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
 
ಇದೆ ಬುಧವಾರದಿಂದ ನಾವು ನವಲಗುಂದ ತಾಲೂಕಿನ ಯಮನೂರು ಗ್ರಾಮದಲ್ಲಿ ನಾವು ಠಿಕಾಣಿ ಹೂಡುತ್ತೇವೆ. ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂದಿಸಿದಂತೆ ನಿಜವಾದ ಹೋರಾಟವನ್ನು ನಾವು ಆರಂಭಿಸುತ್ತೇವೆ. ಯಾವ ಪೊಲೀಸರು ಬರುತ್ತಾರೋ ನೋಡೋಣ ಎಂದು ಸವಾಲ್ ಎಸೆದದಿದ್ದಾರೆ.
 
ಮಹದಾಯಿ ನ್ಯಾಯಾಧಿಕರಣದಲ್ಲಿ ಕರ್ನಾಟಕ ಸಲ್ಲಿಸಿದ ಮಧ್ಯಂತರ ಅರ್ಜಿ ವಜಾಗೊಳ್ಳಲು ಬಿಜೆಪಿ ನಾಯಕರ ವರ್ತನೆಯೇ ಕಾರಣ ಎಂದು ಜೆಡಿಎಸ್‌ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ