ಯೂನಿಸ್ ಚಂಡಮಾರುತದ ಅಬ್ಬರ: ಬ್ರಿಟನ್ ನಲ್ಲಿ 13 ಮಂದಿ ಮೃತ್ಯು

ಭಾನುವಾರ, 20 ಫೆಬ್ರವರಿ 2022 (20:12 IST)
ಪೂರ್ವ ಯುರೋಪ್‌ನಾದ್ಯಂತ ವಿನಾಶಕಾರಿಯಾಗಿ ಪರಿಣಮಿಸಿರುವ ಯೂನಿಸ್ ಚಂಡಮಾರುತದ ಅಬ್ಬರಕ್ಕೆ ನಲುಗಿರುವ ಬ್ರಿಟನ್‌ನಲ್ಲಿ ಕನಿಷ್ಟ 13 ಮಂದಿ ಮೃತಪಟ್ಟಿದ್ದು ಬೃಹತ್ ಮರಗಳು ಉರುಳಿಬಿದ್ದು ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಕನಿಷ್ಟ 2 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಕೆ ಕಡಿತಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 ಬ್ರಿಟನ್, ಐರ್ಲ್ಯಾಂಡ್, ನೆದರ್ಲ್ಯಾಂಡ್, ಬೆಲ್ಜಿಯಂ, ಜರ್ಮನಿ ಮತ್ತು ಪೋಲಂಡ್ನಲ್ಲಿ ಭಾರೀ ಗಾಳಿಯೊಂದಿಗೆ ಬೀಸಿದ ಚಂಡಮಾರುತದ ಅಬ್ಬರಕ್ಕೆ ಸಮುದ್ರದಲ್ಲಿ ಬೃಹತ್ ಅಲೆಗಳು ಎದ್ದಿವೆ. ಬೃಹತ್ ಮರಗಳು ಬುಡಸಹಿತ ಉರುಳಿ ಬಿದ್ದರೆ ಕಸಕಡ್ಡಿ ಮತ್ತಿತರ ತ್ಯಾಜ್ಯಗಳು ಸುಂಟರಗಾಳಿಯಂತೆ ಆಕಾಶದಲ್ಲಿ ಹಾರಾಡುತ್ತಿದ್ದವು ಎಂದು ವರದಿಯಾಗಿದೆ. ಬ್ರಿಟನ್‌ನಲ್ಲಿ  2 ಲಕ್ಷಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಗಂಟೆಗೆ 122 ಮೈಲು ವೇಗದಲ್ಲಿ ಬೀಸಿದ ಗಾಳಿಯಿಂದಾಗಿ ಸಾರಿಗೆ ವ್ಯವಸ್ಥೆ ಮೊಟಕುಗೊಂಡಿದೆ. 
ರೈಲಿನಲ್ಲಿ ಸಂಚರಿಸದಂತೆ ರೈಲ್ವೇ ಇಲಾಖೆ ಜನತೆಗೆ ಮುನ್ನೆಚ್ಚರಿಕೆ ರವಾನಿಸಿದೆ. ನೆದರ್ಲ್ಯಾಂಡಿನಲ್ಲಿ ರೈಲ್ವೇ ನೆಟ್ವರ್ಕ್ ಅಸ್ತವ್ಯಸ್ತವಾಗಿದೆ. ಫ್ರಾನ್ಸ್ ಮತ್ತು ಬ್ರಿಟನ್‌ನಿಂದಸಂಚರಿಸುವ ಅಂತರಾಷ್ಟ್ರೀಯ ಹೈಸ್ಪೀಡ್ ರೈಲ್ವೇ ಸೇವೆಗಳಾದ ಯುರೋಸ್ಟಾರ್ ಮತ್ತು ಥಾಲಿಸ್ ಇಂಟರ್ನ್ಯಾಷನಲ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದೆ. ಫ್ರಾನ್ಸ್ನಲ್ಲೂ ರೈಲ್ವೇ ಸೇವೆ ವ್ಯತ್ಯಯಗೊಂಡಿದ್ದು ಸುಮಾರು 75,000 ಮನೆಗಳಿಗೆ ವಿದ್ಯುತ್ ಪೂರೈಕೆ ಮೊಟಕುಗೊಂಡಿದೆ.
ಈ ಮಧ್ಯೆ, ಶನಿವಾರ ಇಂಗ್ಲಂಡಿನ ದಕ್ಷಿಣ ತೀರ ಹಾಗೂ ವೇಲ್ಸ್‌ನ ದಕ್ಷಿಣ ಭಾಗದಲ್ಲಿ ಶನಿವಾರ ಹಳದಿ ಎಚ್ಚರಿಕೆಯ ಸಂದೇಶ ಘೋಷಿಸಲಾಗಿದ್ದು , ಸಾಧಾರಣದಿಂದ ಕಡಿಮೆ ತೀವ್ರತೆಯ ಗಾಳಿ ಬೀಸುವ ಮುನ್ನೆಚ್ಚರಿಕೆಯನ್ನು ಬ್ರಿಟನ್‌ನ ಹವಾಮಾನ ಇಲಾಖೆ ನೀಡಿದೆ. ನವೆಂಬರ್ನಲ್ಲಿ ಬ್ರಿಟನ್‌ನಲ್ಲಿ  ಆರ್ವೆನ್ ಚಂಡಮಾರುತದ ಹಾವಳಿಯಿಂದ ಸುಮಾರು 1 ಮಿಲಿಯನ್ ಮನೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ