ಬೆಳಗಾವಿ: ಹೆಂಡತಿಯ ಆಸೆ ಪೂರೈಸಲು ಗಂಡಂದಿರು ಏನೇನೋ ಸರ್ಕಸ್ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪತ್ನಿಗೆ ಮಾಂಗಲ್ಯ ಸರ ತೆಗೆದುಕೊಡಲು ಎಟಿಎಂನ್ನೇ ದೋಚಿದ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಈ ಘಟನೆ ನಡೆದಿದೆ. ಕೃಷ್ಣ ಸುರೇಶ್ ದೇಸಾಯಿ ಎಂಬಾತ ಎಟಿಎಂಗೆ ಹಣ ಹಾಕುವ ಕೆಲಸ ಮಾಡುತ್ತಿದ್ದ. ಹೀಗಾಗಿ ಕೀ ಕೂಡಾ ಆತನ ಬಳಿಯಿರುತ್ತಿತ್ತು. ಇದನ್ನೇ ಆತ ಲಾಭ ಮಾಡಿಕೊಂಡು ಹೆಚ್ ಡಿಎಫ್ ಸಿ ಬ್ಯಾಂಕ್ ಎಟಿಎಂನಿಂದ ಹಣ ದೋಚಿದ್ದಾನೆ. ಪೊಲೀಸರು ಈಗ ಈತನನ್ನು ಬಂಧಿಸಿದ್ದಾರೆ.
ಸುಮಾರು ಎಂಟು ಲಕ್ಷ ರೂಪಾಯಿಗಳಷ್ಟು ಹಣ ದೋಚಿರುವುದು ಪತ್ತೆಯಾಗಿದೆ. ಈ ಎಟಿಎಂಗೆ ತನ್ನ ಟೀಂ ಜೊತೆ ಬಂದು ಬೆಳಿಗ್ಗೆ ಹಣ ಹಾಕಿದ್ದ. ಸಂಜೆ ಒಬ್ಬನೇ ಬಂದು ಕಳ್ಳತನ ಮಾಡಿ ಹಣ ದೋಚಿ ಪರಾರಿಯಾಗಿದ್ದಾನೆ. ಹಣ ಕಳುವಾಗಿರುವ ಕಾರಣ ಸಿಸಿಟಿವಿ ದೃಶ್ಯ ಪರಿಶೀಲಿಸಲಾಯಿತು. ಈ ವೇಳೆ ಈತನ ಕೃತ್ಯ ಬಯಲಾಗಿದೆ.
ಎರಡು ದಿನದ ಬಳಿಕ ಕೃತ್ಯ ಬಯಲಿಗೆ ಬಂದಿದೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನಿಂದ ಮಾಂಗಲ್ಯ ಸರ, ಚಿನ್ನದ ಸರ ಮತ್ತು 7 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಪತ್ನಿಗೆ ಮಾಂಗಲ್ಯ ಖರೀದಿಸಲು ಈ ಖತರ್ನಾಕ್ ಕೆಲಸಕ್ಕೆ ಕೈ ಹಾಕಿದ್ದು ತಿಳಿದುಬಂದಿದೆ.