ಹೈದರಾಬಾದ್: ಹೆಂಡತಿಯನ್ನು ಕೊಂದು ಕುಕ್ಕರ್ ನಲ್ಲಿ ಬೇಯಿಸಿ ಕೊನೆಗೆ ಮಾಂಸವನ್ನು ಬಿಸಾಕಿದ ಧಾರುಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
35 ವರ್ಷದ ಮಹಿಳೆಯನ್ನು ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬಳಿಕ ಪಾಪಿ ಪತಿ ಕುಕ್ಕರ್ ನಲ್ಲಿ ಹಾಕಿ ಬೇಯಿಸಿದ್ದಾನೆ. ಬಳಿಕ ಮಾಂಸದ ತುಂಡುಗಳನ್ನು ನದಿಗೆ ಎಸೆದಿದ್ದಾನೆ.
ಇಂತಹದ್ದೊಂದು ಕ್ರೌರ್ಯದ ಬಗ್ಗೆ ತಿಳಿಯುತ್ತಿದ್ದಂತೇ ಜನ ನಿಜಕ್ಕೂ ಬೆಚ್ಚಿಬಿದ್ದಿದ್ದಾರೆ. ಪತಿಯನ್ನು ಈಗ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಪತ್ನಿಯ ದೇಹದ ತುಂಡುಗಳನ್ನು ಬೇಯಿಸಿ ನದಿಗೆ ಎಸೆದಿರುವುದಾಗಿ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
ಈತ ಸೇನೆಯ ಮಾಜಿ ಯೋಧ, ಸದ್ಯಕ್ಕೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಪತ್ನಿಯೊಂದಿಗೆ ಜಗಳವಾಡಿದ ಬಳಿಕ ಈ ಕೃತ್ಯೆವೆಸಗಿದ್ದಾನೆ ಎನ್ನಲಾಗಿದೆ. ದಂಪತಿಗೆ ಇಬ್ಬರು ಮಕ್ಕಳೂ ಇದ್ದರು.
ಕೃತ್ಯ ನಡೆಸಿದ ಬಳಿಕ ಅತ್ತೆ-ಮಾವನೊಂದಿಗೆ ಏನೂ ಅರಿಯದವನಂತೆ ಪೊಲೀಸ್ ಠಾಣೆಗೆ ಬಂದು ಪತ್ನಿ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದ. ತನಿಖೆ ನಡೆಸಿದಾಗ ಈತನ ಕುಕೃತ್ಯ ಬೆಳಕಿಗೆ ಬಂದಿದೆ. ಈತನ ಕೃತ್ಯದ ಬಗ್ಗೆ ತಿಳಿಯುತ್ತಿದ್ದಂತೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.