ಯೋಗೇಶ್ ಗೌಡ ಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ: ವಿನಯ್ ಕುಲ್ಕರ್ಣಿ

ಶುಕ್ರವಾರ, 17 ಜೂನ್ 2016 (12:20 IST)
ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ವಿನಯ್ ಕುಲ್ಕರ್ಣಿ ಹೇಳಿದ್ದಾರೆ.
 
ರಾಜಕೀಯದಲ್ಲಿ ಪರ ವಿರೋಧ ಇದ್ದಿದ್ದೆ. ಆದರೆ, ಯಾರು ಕೊಲೆ ಮಾಡುವ ಮಟ್ಟಕ್ಕೆ ಹೋಗುವುದಿಲ್ಲ, ವಿಧಾನಸೌಧದಲ್ಲಿ ವಾದ ಪ್ರತಿವಾದ ಮಾಡುತ್ತೇವೆ. ಆದರೆ, ರಾಜಕೀಯ ಸೇಡು ತೀರಿಸಿಕೊಳ್ಳಲು ಯಾರು ಬಯಸುವುದಿಲ್ಲ ಎಂದರು. 
 
ಸುಳ್ಳು ಆರೋಪಗಳು ನಮ್ಮ ಮೇಲೆ ಪರಿಣಾಮ ಬೀರುತ್ತವೆ. ಕೇವಲ ರಾಜಕೀಯ ಕಾರಣಗಳಿಗಾಗಿ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ತನಿಖೆಯನ್ನು ಕೈಗೆತ್ತಿಕೊಂಡಿದ್ದು ಕೆಲವೇ ದಿನಗಳಲ್ಲಿ ಸತ್ಯ ಸಂಗತಿ ಬಹಿರಂಗವಾಗಲಿದೆ ಎಂದು ತಿಳಿಸಿದ್ದಾರೆ.
 
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಚಿವ ಎಚ್.ಕೆ.ಪಾಟೀಲ್ ಮತ್ತು ವಿನಯ್ ಕುಲ್ಕರ್ಣಿ ಕೈವಾಡವಿದೆ ಎಂದು ಅನಾಮಧೇಯ ಪತ್ರವೊಂದು ಯೋಗೇಶ್ ಕುಟುಂಬದವರಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಉಭಯ ಸಚಿವರ ಕೈವಾಡದ ವಿರುದ್ಧ ತನಿಖೆಯಾಗಬೇಕು ಎಂದು ಯೋಗೇಶ್ ಕುಟುಂಬದವರು ಸರಕಾರವನ್ನು ಒತ್ತಾಯಿಸಿದ್ದಾರೆ.   

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ