ನಾನು ಹೋರಾಟಕ್ಕೆ ಸಿದ್ಧ: ಯಡಿಯೂರಪ್ಪ

ಗುರುವಾರ, 27 ಅಕ್ಟೋಬರ್ 2016 (10:40 IST)
ಹುಬ್ಬಳ್ಳಿ: 40 ಕೋಟಿ ರು. ಕಿಕ್ ಬ್ಯಾಕ್ ಪ್ರಕರಣದಿಂದ ನಿನ್ನೆಯಷ್ಟೇ ಆರೋಪ ಮುಕ್ತರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗದಗನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ತುಸು ವಿಶ್ರಾಂತಿ ಪಡೆದರು.
ಇಂದು ನಸುಕಿನ ಜಾವ 5.30 ರ ಸುಮಾರಿಗೆ ರಾಣಿ ಚೆನ್ನಮ್ಮ ಎಕ್ಸಪ್ರೆಸ್ ರೈಲಿಗೆ ಆಗಮಿಸಿದ ಅವರನ್ನು ಹುಬ್ಬಳ್ಳಿ ರೇಲ್ವೆ ನಿಲ್ದಾಣದಲ್ಲಿ ಪಕ್ಷದ ಕಾರ್ಯಕರ್ತರು ಬರಮಾಡಿಕೊಂಡರು. ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನನ್ನ ಮೇಲಿನ ಪ್ರಕರಣದ ಕುರಿತು ಯಾರೇ ಹೋರಾಟ ಮಾಡಿದರೂ ಅದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ. ಈಗಾಗಲೇ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎನ್ನುವುದು ಸಾಬೀತಾಗಿದೆ. ಇನ್ನೇನಿದ್ದರೂ ಪಕ್ಷ ಸಂಘಟನೆಯೊಂದೇ ನನ್ನ ಏಕೈಕ ಗುರಿ ಎನ್ನುವ ಮೂಲಕ ಎಸ್.ಆರ್. ಹಿರೇಮಠ ಅವರಿಗೆ ತಿರುಗೇಟು ನೀಡಿದರು.
 
ರಾಜ್ಯ ಸರಕಾರ ಟಿಪ್ಪುಸುಲ್ತಾನ ಜಯಂತಿ ಆಚರಣೆ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಮುಂದಾಗುತ್ತಿದೆ. ಈಗಾಗಲೇ ಸಮಾಜದಲ್ಲಿ ಅಶಾಂತಿ ಹೆಚ್ಚುತ್ತಿದೆ. ಹೀಗಿದ್ದಾಗ ಟಿಪ್ಪು ಜಯಂತಿ ಆಚರಿಸಿದರೆ ಇನ್ನಷ್ಟು ಸಮಸ್ಯೆ ಎದುರಾಗಬಹುದು. ಜನರ ಆಶೋತ್ತರಕ್ಕೆ ವಿರುದ್ಧವಾಗಿ ಸರಕಾರ ಯಾವತ್ತೂ ನಡೆದುಕೊಳ್ಳಬಾರದು ಎಂದರು.
 
ಓಬಿಸಿ ಸಮಾವೇಶ ನಡೆಸುವ ಜವಾಬ್ದಾರಿ ಕೆ.ಎಸ್. ಈಶ್ವರಪ್ಪ ಹಾಗೂ ಪುಟ್ಟಸ್ವಾಮಿ ಅವರ ಹೆಗಲಿಗೆ ಹಾಕಲಾಗಿದೆ. ಸಮಾವೇಶದ ಸಿದ್ಧತೆ ಭರದಿಂದ ಸಾಗುತ್ತಿದೆ. ಅದೊಂದು ಐತಿಹಾಸಿಕ ಸಮಾವೇಶವನ್ನಾಗಿ ಮಾಡಲೂ ಎಲ್ಲ ಕ್ರಮವನ್ನೂ ಕೈಗೊಳ್ಳಲಾಗಿದೆ ಎಂದ ಯಡಿಯೂರಪ್ಪ, ಪಕ್ಷದೊಳಗೆ ಯಾವುದೇ ವೈಮನಸ್ಸು ಇಲ್ಲ ಎಂದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ