ರಾಜ್ಯ ಸರಕಾರಕ್ಕೆ ಗಂಡಸ್ತನವಿದ್ದರೇ ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಲಿ: ಎಚ್.ಡಿ.ಕುಮಾರಸ್ವಾಮಿ
ಶನಿವಾರ, 30 ಜುಲೈ 2016 (12:44 IST)
ಧಾರವಾಡ ಪೊಲೀಸರಿಂದ ಮಹದಾಹಿ ಹೋರಾಟಗಾರರ ಮೇಲಿನ ಅಮಾನವೀಯ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಕಾಯುವುದಿಲ್ಲ. ನಾನೇ ಬೀದಿಗಳಿದು ಹೋರಾಟ ನಡೆಸುತ್ತೇನೆ. ರಾಜ್ಯ ಸರಕಾರಕ್ಕೆ ಗಂಡಸ್ತನವಿದ್ದರೇ ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರಕಾರಕ್ಕೆ ನೇರ ಸವಾಲ್ ಎಸೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರಿಗೆ ಮನುಷ್ಯತ್ವ ಇಲ್ವಾ? ಗೃಹ ಸಚಿವರೇ ನೀವು ಟಿವಿಯಲ್ಲಿ ಬಿತ್ತರವಾಗುತ್ತಿರುವ ಸುದ್ದಿಯನ್ನು ನೋಡಿಲ್ಲವೇ? ನೀವು ಕರ್ನಾಟಕ ರಾಜ್ಯದಲ್ಲಿ ಇಲ್ಲವೇ ಎಂದು ರೈತರ ಮೇಲಿನ ಹಲ್ಲೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ವಿನಯ ಕುಲಕರ್ಣಿ ಅವರಿಗೆ ಮಾನವೀಯತೆ ಇದೀಯಾ? ಸಾರ್ವಜನಿಕರನ್ನು ಸಾಯಿಸಲು ಕುಲಕರ್ಣಿ ಉಸ್ತುವಾರಿ ಸಚಿವನಾದ್ನಾ? ಡಿಜಿ ಹಾಗೂ ಐಜಿಪಿ ಓಂ ಪ್ರಕಾಶ್ ಅನ್‌ಫೀಟ್ ಫೇಲೋ ಎಂದು ಗುಡುಗಿದರು.
ನೀರಿಗಾಗಿ ರೈತರು ಹೋರಾಟ ನಡೆಸುತ್ತಿದ್ದರೆ, ಪೊಲೀಸರು ರೈತರ ಮೇಲೆ ಹಲ್ಲೆ ಮಾಡುವ ಮೂಲಕ ಗುಂಡಾಗಿರಿ ಪ್ರದರ್ಶಿಸುತ್ತಿದೆ. ಇದೇನು ಬ್ರಿಟಿಷ ಆಡಳಿತವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಧಮ್ಕಿ ಹಾಕಿರುವ ಪ್ರಕರಣದ ಆರೋಪಿ ಸಿಎಂ ಆಪ್ತ ಮರಿಗೌಡನನ್ನು ಬಂಧಿಸದ ಸರಕಾರ ಇಲ್ಲಿ ಬಂದು ಹೋರಾಟಗಾರರ ಮೇಲೆ ಹಲ್ಲೆ ನಡೆಸುತ್ತಿದೆ. ಈ ಪ್ರಕರಣವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಯಾರು ಇಂತಹ ಕೃತ್ಯಕ್ಕೆ ಯತ್ನಿಸಬಾರದು. ನಾನು ರಾಜಕೀಯ ನಿವೃತ್ತಿ ಪಡೆದು ರೈತರ ಪರ ಹೋರಾಡಲು ಸಿದ್ಧ ಎಂದು ತಿಳಿಸಿದರು.
ರಾಜ್ಯದಲ್ಲಿ ರೈತರು ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ಅವರ ಮೇಲೆ ಹಲ್ಲೆ ಮಾಡುವ ಮೂಲಕ ಗುಂಡಾಗಿರಿ ಪ್ರದರ್ಶಿಸುತ್ತಿದೆ. ಮಹಿಳೆಯರು ಮಕ್ಕಳು ಎನ್ನದೆ ಅವರ ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಮಹಿಳೆಯರ ತೋಡೆಯ ಮೇಲೆ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ರಾಜ್ಯ ಸರಕಾರಕ್ಕೆ ನಾಚಿಕೆಯಾಗಲ್ವಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ