ಶ್ರೀಕೃಷ್ಣ ಮಠವನ್ನು ಸರ್ಕಾರ ತನ್ನ ವಶಕ್ಕೆ ಪಡೆದರೆ ನಾನು ಮಠದಿಂದ ಹೊರಬರುತ್ತೇನೆ-ವಿಶ್ವೇಶತೀರ್ಥ ಸ್ವಾಮೀಜಿ
ಗುರುವಾರ, 8 ಫೆಬ್ರವರಿ 2018 (07:07 IST)
ಉಡುಪಿ : ರಾಜ್ಯದ ಖಾಸಗಿ ಮಠ ಮಂದಿರಗಳನ್ನು ಸರ್ಕಾರೀಕರಣಗೊಳಿಸುವ ಬಗೆಗಿನ ಸರ್ಕಾರದ ಈ ವಿಚಾರಕ್ಕೆ ಉಡುಪಿಯಲ್ಲಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು,’ ಉಡುಪಿ ಶ್ರೀಕೃಷ್ಣ ಮಠವನ್ನು ಸರ್ಕಾರ ತನ್ನ ವಶಕ್ಕೆ ಪಡೆಯುವ ಪ್ರಯತ್ನ ಮಾಡಿದರೆ ನಾನು ಮಠದಿಂದ ಹೊರಬರುತ್ತೇನೆ. ಸರಕಾರದ ನೌಕರನಾಗಿ ನಾನು ಮಠದಲ್ಲಿ ಒಂದು ಕ್ಷಣವೂ ಇರಲಾರೆ’ ಎಂದು ಸರ್ಕಾರಕ್ಕೆ ಅವರು ತಿರುಗೇಟು ನೀಡಿದ್ದಾರೆ.
‘ರಾಜ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ದೇವಾಲಯ- ಮಠಗಳನ್ನು ಸರ್ಕಾರಿಕರಣ ಮಾಡುವ ಚಿಂತನೆ ವಿಪಕ್ಷಗಳ ಹೋರಾಟಕ್ಕೆ ಅಸ್ತ್ರ ಸಿಕ್ಕಂತಾಗುತ್ತದೆ. ಚುನಾವಣಾ ಹೊಸ್ತಿಲಲ್ಲಿ ವಿಪಕ್ಷಗಳು ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆಯಿದೆ. ಸರ್ಕಾರದ ವಿರುದ್ಧ ನಾನು ಹೋರಾಟ ಮಾಡುವುದಿಲ್ಲ. ಸರ್ಕಾರದ ಈ ನಡೆಯ ಬಗ್ಗೆ ಜನರು, ಮಠದ ಭಕ್ತರು ಚಿಂತನೆ ನಡೆಸಲಿ. ಒಂದು ಸರಿಯಾದ ತೀರ್ಮಾನಕ್ಕೆ ಬರಲಿ’ ಎಂದು ಪೇಜಾವರ ಸ್ವಾಮೀಜಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ