ಬೆಂಗಳೂರು : ಪಿಯುಸಿ ಪರೀಕ್ಷೆಗೆ ಸರ್ಕಾರ ಹೊಸ ಅಂಕ ಮಾದರಿ ಜಾರಿಗೊಳಿಸಿದೆ. 2023-24ನೇ ಸಾಲಿನ ವರ್ಷದಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ.
ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ ಇನ್ನು ಮುಂದೆ 20 ಆಂತರಿಕ ಅಂಕ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಭಾಷಾ ವಿಷಯಗಳು ಮತ್ತು ಕೋರ್ ಸಬ್ಜೆಕ್ಟ್ಗಳಿಗೆ ಈ ನಿಯಮ ಅನ್ವಯ ಆಗಲಿದೆ.
ಇಷ್ಟು ದಿನ ವಿಜ್ಞಾನ ವಿಷಯಗಳಿಗೆ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿತ್ತು. 70 ಅಂಕಕ್ಕೆ ಥಿಯರಿ ಇತ್ತು. ಪ್ರಾಯೋಗಿಕ ಪರೀಕ್ಷೆ ಇಲ್ಲದೆ ವಿಷಯಗಳಿಗೆ ಇನ್ನು ಮುಂದೆ ಆಂತರಿಕ ಅಂಕ ನೀಡಲು ನಿರ್ಧಾರ ಮಾಡಲಾಗಿದೆ. 100 ಅಂಕಕ್ಕೆ ಇದ್ದ ನಿಯಮ ಬದಲಾವಣೆ ಮಾಡಿ 80 ಅಂಕ ಥಿಯರಿ, 20 ಆಂತರಿಕ ಅಂಕ ನೀಡುವ ನಿಯಮ ಜಾರಿ ಮಾಡಲಾಗಿದೆ.
ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಗೆ ಈ ನಿಯಮ ಅನ್ವಯ ಆಗಲಿದೆ. ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿಗಳ ದೃಷ್ಟಿಯಿಂದ ಈ ನಿಯಮ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.