ಬೆಂಗಳೂರು:ವೈದ್ಯರು ಅತ್ತ ತನ್ನ ಮಿದುಳು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರೆ, ಇತ್ತ ಈ ರೋಗಿ ಗಿಟಾರ್ ನುಡಿಸುತ್ತಲೇ ಇದ್ದ.. ಇದು ಕಥೆಯಲ್ಲ. ಸಿಲಿಕಾನ್ ಸಿಟಿ ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಆಸ್ಪತ್ರೆ ಹೀಗೊಂದು ವಿಶೇಷ ಶಸ್ತ್ರಚಿಕಿತ್ಸೆಗೆ ಸಾಕ್ಷಿಯಾದ ಘಟನೆ ನಡೆದಿದೆ.
ಇಂತಹದೊಂದು ಸಾಹಸಕ್ಕೆ ಈ ಆಸ್ಪತ್ರೆ ಕೈಹಾಕಿದ್ದಲ್ಲದೆ, ಯಶಸ್ವಿಯೂ ಆಗಿರುವುದು ವಿಶೇಷ. ಸಾಫ್ಟ್ ವೇರ್ ಎಂಜಿನಿಯರ್ ಹಾಗೂ ಗಿಟಾರ್ ವಾದಕ, ಬಿಹಾರದ ಅಭಿಷೇಕ್ ಪ್ರಸಾದ್ ಎಂಬುವವರ ಕಿರುಬೆರಳು, ಉಂಗುರ ಬೆರಳುಗಳ ಚಲನೆ ಕಷ್ಟಕರವಾಗಿತ್ತು. ಇದರಿಂದ ಅವರಿಗೆ ಗಿಟಾರ್ ನುಡಿಸಲು ಕಷ್ಟವಾಗಿತ್ತು. ಮಿದುಳಿನ ನರಗಳಲ್ಲಿ ಉಂಟಾಗಿದ್ದ ಅತಿಸೂಕ್ಷ್ಮ ಗಾಯದಿಂದ ದೇಹದ ಕೆಲ ಭಾಗಕ್ಕೆ ಸಂಜ್ಞೆಗಳು ಸರಿಯಾಗಿ ರವಾನೆಯಾಗದೇ, ಇಂತಹ ಸಮಸ್ಯೆ ಕಾಣಿಸಿಕೊಂಡಿತ್ತು. ಎಂಆರ್‌ಐ ಯಂತ್ರದ ಸಹಾಯದಿಂದ ಅಭಿಷೇಕ್ ಅವರ ತಲೆಯಲ್ಲಿ ಸಣ್ಣ ರಂಧ್ರ ಕೊರೆದು, ನರಗಳಲ್ಲಿನ ದೋಷವನ್ನು ಸರಿಪಡಿಸಲು 7 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ವೇಳೆ ಅವರು ಸಂಪೂರ್ಣ ಎಚ್ಚರವಾಗಿದ್ದು, ಗಿಟಾರ್ ನುಡಿಸುತ್ತಿದ್ದರು. ಸಮಸ್ಯೆ ಇರುವ ನರಗಳಿಗೆ ಚಿಕಿತ್ಸೆ ನೀಡುತ್ತಿದ್ದಂತೆಯೇ ಅವರ ಕೈ ಬೆರಳುಗಳ ಚಲನೆಯಲ್ಲೂ ವ್ಯತ್ಯಾಸ ಗೋಚರವಾಗಿತ್ತು. ವೈದ್ಯರು ಅಭಿಷೇಕ್ ಅವರೊಂದಿಗೆ ಸಂವಹನ ನಡೆಸಿ, ಸಮಸ್ಯೆಯನ್ನು ಸಂಪೂರ್ಣ ಬಗೆಹರಿಸಿದ್ದಾರೆ.
ಡಿಸ್ಟೋನಿಯಾ ಸಮಸ್ಯೆಯಿಂದ ಬಳಲುತ್ತಿದ್ದ ಅಭಿಷೇಕ್ ಅವರಿಗೆ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಹಿರಿಯ ನರರೋಗ ತಜ್ಞ ಡಾ.ಸಿ.ಸಿ.ಸಂಜಯ್ ಅವರು, ತೊಂದರೆಗೆ ಒಳಗಾದ ಮೆದುಳಿನ ಸೂಕ್ಷ್ಮಭಾಗವನ್ನು ಪತ್ತೆ ಮಾಡಲು ಹೊಸ ವಿಧಾನ ಅನುಸರಿಸಿದರು. ಶಸ್ತ್ರಚಿಕಿತ್ಸೆ ಮುನ್ನವೇ ಆಪರೇಷನ್ ಟೇಬಲ್‌ನಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವೈದ್ಯರ ಸಲಹೆಯಂತೆ ಅಭಿಷೇಕ್ ಗಿಟಾರ್ ನುಡಿಸಲು ಆರಂಭಿಸುತ್ತಿದ್ದಂತೆ ಕಾರ್ಯೋನ್ಮುಖರಾದ ಡಾ.ಸಂಜಯ್ ನೇತೃತ್ವದ ನರರೋಗ ತಜ್ಞರ ತಂಡ, ಮೆದುಳಿನ ಸೂಕ್ಷ್ಮಭಾಗದ ನರಗಳಲ್ಲಿದ್ದ ದೋಷ ಪತ್ತೆ ಕಾರ್ಯದಲ್ಲಿ ತೊಡಗಿದ್ದರು. ಅಭಿಷೇಕ್ ಗಿಟಾರ್ ನುಡಿಸುತ್ತಲೇ ಇದ್ದರು. ದೋಷಪೂರಿತ ನರಗಳಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಲೇ ಇದ್ದರು. ಅಂತಿಮವಾಗಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿ, ವೈದ್ಯರು ನಿಟ್ಟುಸಿರು ಬಿಟ್ಟಿದ್ದಾರೆ.