ಸಚಿವ ಎಂ.ಬಿ.ಪಾಟೀಲ್ ಬೇಜವಾಬ್ದಾರಿ ವರ್ತನೆಯಿಂದ ತಮಿಳುನಾಡಿಗೆ ನೀರು: ಪೂಜಾರಿ ಕಿಡಿ

ಬುಧವಾರ, 7 ಸೆಪ್ಟಂಬರ್ 2016 (14:41 IST)
ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ನಿಭಾಯಿಸುವಲ್ಲಿ ಸರಕಾರ ವಿಫಲವಾಗಿದೆ. ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಗುಡುಗಿದ್ದಾರೆ. 
 
ಸಚಿವ ಪಾಟೀಲ್ ರಾಜೀನಾಮೆ ನೀಡದಿದ್ದಲ್ಲಿ ಸಿಎಂ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ರಾಜ್ಯ ಸರಕಾರ ರಾಜ್ಯದಲ್ಲಿರುವ ಜಲಾಶಯಗಳ ನೀರಿನ ಮಟ್ಟವನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ. ಇದಕ್ಕೆ ಸಚಿವರ, ಸರಕಾರದ ಬೇಜವಾಬ್ದಾರಿ ವರ್ತನೆ ಮೂಲಕಾರಣವಾಗಿದೆ ಎಂದು ಕಿಡಿಕಾರಿದ್ದಾರೆ.
 
ಸುಪ್ರೀಂಕೋರ್ಟ್ ತೀರ್ಪು ಬರುವ ಮುಂಚೆಯೇ ಕಾವೇರಿ ಜಲಾಶಯಗಳ ನೀರಿನ ಹರಿವಿನ ಬಗ್ಗೆ ನ್ಯಾಯಾಲಯಕ್ಕೆ ಮನದಟ್ಟು ಮಾಡಬೇಕಾಗಿತ್ತು. ಇದೀಗ ಸುಪ್ರೀಂಕೋರ್ಟ್ ಆದೇಶ ನೀಡಿದೆ ಎಂದು ತಮಿಳುನಾಡಿಗೆ ನೀರು ಹರಿಸುತ್ತಿರುವುದು ಹೇಯ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
 
ರಾಜ್ಯ ಸರಕಾರ ಜನತೆಯ ಹಿತಾಸಕ್ತಿಯ ಬಗ್ಗೆ ನಿರ್ಲಕ್ಷ್ಯವಹಿಸುವುದು ಸರಿಯಲ್ಲ. ಪದೇ ಪದೇ ನ್ಯಾಯಾಲಯದಲ್ಲಿ ಸೋಲನುಭವಿಸುತ್ತಿರುವ ರಾಜ್ಯ ಸರಕಾರಕ್ಕೆ ನಾಚಿಕೆಯಾಗುವುದಿಲ್ಲವೇ? ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ