ಐಟಿ ಬಿಟಿ ಸಿಟಿಯ ಜಂಕ್ಷನ್‌ಗಳಿಗೆ ಸಿಗ್ತಿದೆ ಹೈಟೆಕ್‌ ಟಚ್

ಭಾನುವಾರ, 4 ಜೂನ್ 2023 (18:30 IST)
ಸದಾ ಜನಜಂಗುಳಿ, ಟ್ರಾಫಿಕ್‌, ಹಾರ್ನ್ ‌ಸದ್ದಿನಿಂದ ಕೂಡಿದ್ದ ಸಿಲಿಕಾನ್‌ ಸಿಟಿಯಲ್ಲಿರುವ ಹಲವು ಜಂಕ್ಷನ್‌ಗಳಿಗೆ ಈಗ ಹೈಟೆಕ್‌ ಸ್ಪರ್ಷ ಸಿಗ್ತಿದೆ.  ಪ್ರತಿನಿತ್ಯ ಸಿಲಿಕಾನ್‌ ಸಿಟಿಯ ಜಂಕ್ಷನ್‌‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತವೆ. ಸದಾ ಟ್ರಾಫಿಕ್‌, ವಾಹನಗಳ ಸದ್ದು ಹಾಗೂ ಧೂಳಿನಿಂದ ಕಂಗೆಟ್ಟ ಜನರಿಗೆ ರಸ್ತೆ ಬದಿ ನಿಲ್ಲಲು ಹಾಗೂ ಬಿಸಿಲಿನ ವೇಳೆ ವಿಶ್ರಾಂತಿ ಪಡೆಯಲು ಸರಿಯಾದ ಜಾಗವಿರಲಿಲ್ಲ. ಆದರೆ ಈಗ ಆ ಜಂಕ್ಷನ್‌ಗಳ ಸ್ವರೂಪವೇ ಬದಲಾಗುತ್ತಿದ್ದು. ಜಂಕ್ಷನ್‌ಗಳಿಗೆ ಹೈಟೆಕ್‌ ಸ್ಪರ್ಷ ನೀಡಲು ಬಿಬಿಎಂಪಿ ಮುಂದಾಗಿದೆ.

ಬೆಂಗಳೂರಿನಲ್ಲಿರುವ ಸುಮಾರು 25 ಜಂಕ್ಷನ್‌ಗಳು ಇನ್ಮುಂದೆ ಕಲ್ಲಿನ ಹಾಸು, ವಿದ್ಯುತ್‌ ದೀಪ, ಕಾರಂಜಿಗಳಿಂದ ನಳನಳಿಸಲಿವೆ. ಜಂಕ್ಷನ್‌ಗಳ ಸೌಂದರ್ಯವನ್ನು ಸವಿಯುವ ಜೊತೆಗೆ, ಕಾರಂಜಿಯ ಸೊಬಗಿನಲ್ಲಿ ಅಲ್ಲೊಂದಷ್ಟು ಹೊತ್ತು ವಿಶ್ರಾಂತಿ ಪಡೆಯುವ ಅವಕಾಶವೂ ಲಭ್ಯವಾಗಲಿದೆ.ಜನರಿಗೆ ಕುಳಿತು ಕೊಳ್ಳಲು ವಿಶಾಲವಾದ ಕಲ್ಲಿನ ಹಾಸು, ಕಲ್ಲಿನ ಕುರ್ಚಿಗಳನ್ನೂ ಅಳವಡಿಸಲಾಗುತ್ತಿದ್ದು, ಜೊತೆಗೆ ಅಲ್ಲಲ್ಲಿ ಗಿಡ-ಮರಗಳನ್ನು ನೆಡುವುದರ ಮೂಲಕ ಜಂಕ್ಷನ್‌ಗಳನ್ನು ಮತ್ತಷ್ಟು ಅಂದಗೊಳಿಸಲಾಗುತ್ತಿದೆ. 25ರಲ್ಲಿ 23 ಜಂಕ್ಷನ್‌ಗಳಲ್ಲಿ ಕಾರಂಜಿಗಳನ್ನು ಸೃಷ್ಟಿಸಲಾಗುತ್ತಿದ್ದು, ಇದು ಆಹ್ಲಾದಕರ ವಾತಾವರಣ ನೀಡುವ ಜೊತೆಗೆ ವಾಯುಮಾಲಿನ್ಯವನ್ನು ಅಲ್ಪಮಟ್ಟಿಗೆ ತಡೆಯುತ್ತದೆ.

ಇನ್ನೂ.. ಹಡ್ಸನ್‌ ವೃತ್ತ, ಎನ್‌.ಆರ್.ಸ್ಕ್ವೇರ್‌, ಟೌನ್‌ಹಾಲ್‌, ಬ್ರಿಗೇಡ್ ರಸ್ತೆ,  ಮೆಯೊ ಹಾಲ್‌, ಕೆ.ಎಚ್.ವೃತ್ತ, ಅಶೋಕ ಪಿಲ್ಲರ್‌, ಡೇರಿ ವೃತ್ತ, ಹಡ್ಸನ್‌ ಪೊಲೀಸ್‌ ಪಾರ್ಕ್, ಗುಬ್ಬಿ ತೋಟದಪ್ಪ ಛತ್ರ ರಸ್ತೆ, ಎಂಟಿಆರ್‌ ಗೇಟ್‌, ಸರ್ಕಲ್‌ ಮಾರಮ್ಮ, ವಿಧಾನಸೌಧ, ಗಾಲ್ಫ್‌ ಕೋರ್ಸ್‌, ಉಪ್ಪಾರಪೇಟೆ, ಸುಮನಹಳ್ಳಿ, ಮಾಧವನ್‌ ಪಾರ್ಕ್‌,  ಬಿಇಎಲ್‌, ಹೆಬ್ಬಾಳ, ಕಂಟೋನ್ಮೆಂಟ್‌, ಜ್ಞಾನಭಾರತಿ, ಗುಟ್ಟಹಳ್ಳಿ, ದೊಮ್ಮಲೂರಿನ ಜಂಕ್ಷನ್‌ಗಳಲ್ಲಿ ಜನರಿಗೆ ವಿಶ್ರಾಂತಿ ಪಡೆಯಲು ಜಾಗಗಳನ್ನು ನಿರ್ಮಾಣ ಮಾಡಲಾಗತ್ತಿದ್ದು,  ಟೌನ್‌ಹಾಲ್‌, ಶೇಷಾದ್ರಿ ರಸ್ತೆಯ ಮೌರ್ಯ ವೃತ್ತ, ಹಡ್ಸನ್‌ ವೃತ್ತ, ಎನ್‌.ಆರ್‌.ಸ್ಕ್ವೇರ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣಗೊಂಡಿವೆ.ಜಂಕ್ಷನ್‌ಗಳ ಅಭಿವೃದ್ಧಿ ಹಿಂದಿಗಿಂತ ಭಿನ್ನವಾಗಿದೆ. ಸುತ್ತಮುತ್ತ ಯಾವುದೇ ಬೇಲಿಗಳನ್ನು ನಿರ್ಮಿಸದೆ, ತೆರೆದ ಜಾಗದ ರೀತಿ ಇದನ್ನು ನಿರ್ಮಿಸಲಾಗುತ್ತಿದೆ. ಜನರು ಯಾವಾಗ ಬೇಕಾದರೂ ಬಂದು ವಿಶ್ರಾಂತಿ ಪಡೆಯಬಹುದಾಗಿದೆ. ಇದೇ ರೀತಿ ನಗರದ ಎಲ್ಲ ಜಂಕ್ಷನ್‌ಗಳನ್ನೂ ಅಲ್ಲಿನ ಸ್ಥಳಕ್ಕೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ.

ಒಟ್ಟಿನಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಐಟಿಬಿಟಿ ಸಿಟಿಯಲ್ಲಿ ಜನರಿಗೆ ನಿಲ್ಲಲು ನಿಲ್ಲಲು ಜಾಗ ಇಲ್ಲದ ಹಾಗೆ ಕಟ್ಟಡಗಳು ಕಟ್ಟಡಗಳು ತಲೆಯೆತ್ತಿದ್ದು ಜಂಕ್ಷನ್ ಗಳಲ್ಲಿ ನಿರ್ಮಾಣವಾಗುತ್ತಿರುವ ಇಂತಹ ಜಾಗಗಳಲ್ಲಿ ಜನರು ಕೆಲಕಾಲ ಕುಳಿತು ವಿಶ್ರಾಂತಿ ಪಡೆಯಬಹುದಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ