ಜಮೀರ್ ಅಹಮ್ಮದ್, ಚೆಲುವರಾಯ ಸ್ವಾಮಿಗೆ ಈಗ ಕಾಂಗ್ರೆಸ್ ಓಲೈಸುವುದೇ ಕೆಲಸ!

ಮಂಗಳವಾರ, 7 ಫೆಬ್ರವರಿ 2017 (10:28 IST)
ಬೆಂಗಳೂರು: ಜೆಡಿಎಸ್ ನಿಂದ ಹೊರ ಹಾಕಲ್ಪಟ್ಟ ಮೇಲೆ ಶಾಸಕ ಜಮೀರ್ ಅಹಮ್ಮದ್,  ಚೆಲುವರಾಯ ಸ್ವಾಮಿ ಸ್ಥಿತಿ ತ್ರಿಶಂಕುವಾಗಿದೆ. ಬಿಜೆಪಿಗೆ ಹೋಗಲಾರದೆ ಕಾಂಗ್ರೆಸ್ ಓಲೈಕೆಯಲ್ಲಿ ತೊಡಗಿದ್ದಾರೆ.

 
ನಿನ್ನೆ ವಿಧಾನಮಂಡಲದ ಅಧಿವೇಶನಕ್ಕೆ ಮುನ್ನ ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಾದ ವಿಷಯಗಳ ಬಗ್ಗೆ ಬಿಜೆಪಿ, ಜೆಡಿಎಸ್ ಕಟು ಟೀಕೆ ಮಾಡುತ್ತಿದ್ದರೆ,  ಚೆಲುವರಾಯ ಸ್ವಾಮಿ ಹೊಗಳುತ್ತಿದ್ದಾರೆ. ರಾಜ್ಯಪಾಲರ ಭಾಷಣದಲ್ಲಿ ಉತ್ತಮ ಬಜೆಟ್ ನ ಸೂಚನೆ ಸಿಕ್ಕಿದೆ ಎಂದು ಚೆಲುವರಾಯ ಸ್ವಾಮಿ ಬಣ್ಣಿಸಿದ್ದಾರೆ. ಈ ಮೂಲಕ ಆಡಳಿತ ಪಕ್ಷ ಕಾಂಗ್ರೆಸ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಅತ್ತ ಜಮೀರ್ ಅಹಮ್ಮದ್ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಜತೆ ಭಾರೀ ಚರ್ಚೆಯಲ್ಲಿ ತೊಡಗಿದ್ದು ಕಂಡುಬಂತು. ಸುಮಾರು ಮುಕ್ಕಾಲು ಗಂಟೆ ಭಿನ್ನಮತೀಯ ನಾಯಕ ಜಮೀರ್ ಅಹಮ್ಮದ್ ಡಿಕೆಶಿ ಜತೆ ಚರ್ಚಿಸಿದ್ದು, ಕುತೂಹಲ ಮೂಡಿಸಿತು.  ಜೆಡಿಎಸ್ ನಿಂದ ಉಚ್ಛಾಟಿತರಾದ ಈ ನಾಯಕರುಗಳು ಕಾಂಗ್ರೆಸ್ ಓಲೈಕೆಯಲ್ಲಿ ತೊಡಗಿರುವುದು ನೋಡಿದರೆ ಇವರು ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗಳಿಗೆ ಇನ್ನಷ್ಟು ಇಂಬು ನೀಡಿದಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ