ಕರೋನಾ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಲು ಲಸಿಕೆ ಪರಿಣಾಮಕಾರಿ. ಮೂರನೇ ಅಲೆಯು ಹೆಚ್ಚಿನ ಹಾನಿಯನ್ನು ಮಾಡದೇ ಇರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಬೊಮ್ಮನಹಳ್ಳೀ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲಸಿಕೆ ವಿತರಣೆಯ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುತ್ತಿದ್ದು, ಮೂರನೇ ಅಲೆಯನ್ನು ಎದುರಿಸಲು ಈಗನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಬೊಮ್ಮನಹಳ್ಳೀ ಶಾಸಕ ಸತೀಶ್ ರೆಡ್ಡಿ ತಿಳಿಸಿದರು.
ಇಂದು ಜೆಪಿನಗರದ ಪುಟ್ಟೇನಹಳ್ಳಿ ಪೋಲೀಸ್ ಠಾಣೆಯ ಬಳೀ ಇರುವ ಸತ್ಯಸಾಯಿಗಣಪತಿ ದೇವಸ್ಥಾನದ ಆಟದ ಮೈದಾನದ ಬಳಿ ಆರೋಗ್ಯದೀಪ ಸ್ವಾಸ್ಥ್ಯ ಸಮಿತಿ, ಸ್ವಾತಿ ಮಹಿಳಾ ಸಂಘ ಹಾಗೂ ಸ್ಥಳೀಯ ಮುಖಂಡರ ಸಹಯೋಗದೊಂದಿಗೆ 18-45 ವರ್ಷ ವಯಸ್ಸಿನವರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರೋನಾ ಮಹಾಮಾರಿ ಎಲ್ಲರನ್ನೂ ಒಂದಿಲ್ಲ ಒಂದು ರೀತಿಯಲ್ಲಿ ತೊಂದರೆಗೀಡು ಮಾಡಿತು. ಈ ಮಹಾಮಾರಿಯ ಮೂರನೇ ಅಲೆಯನ್ನು ತಡೆಯಲು ಲಸಿಕಾ ಕಾರ್ಯಕ್ರಮ ಬಹಳ ಪ್ರಮುಖವಾದದ್ದು. ಈ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತಹ ಹಲವಾರು ಪ್ರದೇಶಗಳಲ್ಲಿ ಉಚಿತ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅದರ ಉಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಮೂರನೇ ಅಲೆ ಹೆಚ್ಚಿನ ಹಾನಿ ಮಾಡದೇ ಇರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಈಗಾಗಲೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಮುಂಜಾಗ್ರತೆಯಾಗಿ ಕ್ರೋಢೀಕರಿಸುವ ನಿಟ್ಟಿನಲ್ಲೂ ನಾವು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರರಾದ ರಾಮ್ ಮೋಹನ್ ರಾಜ್, ಮಾಜಿ ಕಾರ್ಪೋರೇಟರ್ ಶೋಭಾ ಮುನಿರಾಮ್, ಪ್ರಭಾವತಿ ರಮೇಶ್ ಹಾಗೂ ಸ್ಥಳೀಯ ಮುಖಂಡರುಗಳು ಚಾಲನೆ ನೀಡಿದರು.