ಜ್ಯೋತಿ ಉದಯ್ ಮೇಲೆ ಎಟಿಎಂ ನಲ್ಲಿ ಹಲ್ಲೆ ಮಾಡಿರುವುದು ಸತ್ಯ; ಇಂದೇ ನನಗೆ ಶಿಕ್ಷೆ ನೀಡಿ ಎಂದ ಆರೋಪಿ

ಶನಿವಾರ, 29 ಡಿಸೆಂಬರ್ 2018 (07:15 IST)
ಬೆಂಗಳೂರು: ನಗರದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಎಂಬವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿ ಮಧುಕರ್ ರೆಡ್ಡಿಯನ್ನು ಎಸ್.ಜೆ.ಪಾರ್ಕ್ ಪೊಲೀಸರು ಕೋರ್ಟ್ ಗೆ ಹಾಜರಿಪಡಿಸಿದ್ದಾರೆ. ಆರೋಪಿ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಜನವರಿ 7ರಂದು ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ನಡೆಸಲಿದೆ.

 
ಆಂಧ್ರ ಪ್ರದೇಶ ಮೂಲದ ಮಧುಕರ್ ರೆಡ್ಡಿ ವಿರುದ್ಧದ ದೋಷಾರೋಪಣೆ ಹೊರೆಸಲು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರ ಮುಂದೆ ಆರೋಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಜ್ಯೋತಿ ಉದಯ್ ಮೇಲೆ ಹಲ್ಲೆ ಮಾಡಿರುವುದು ಸತ್ಯ ನನ್ನ ಪರವಾಗಿ ಯಾವುದೇ ವಕೀಲರು ಬೇಡ. ನನಗೆ ಹೆಂಡತಿ ಮಕ್ಕಳು ಇದ್ದಾರೆ. ನಾನು ವಾಪಸ್ ಹೋಗಬೇಕು. ದಯವಿಟ್ಟು ಇಂದೇ ನನಗೆ ಶಿಕ್ಷೆ ನೀಡಿ ಎಂದು 65ನೇ ಸೆಷನ್ಸ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡ.


ಮಧುಕರ್ ರೆಡ್ಡಿ ಮನವಿಗೆ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶರು, ನಿಮ್ಮ ಮೇಲಿರುವ ಆರೋಪಕ್ಕೆ ಜೀವಾವಧಿ ಶಿಕ್ಷೆ ಇದೆ. ತಪ್ಪೊಪ್ಪಿಗೆ ಹೇಳಿಕೆ ನೀಡಿದರೂ ಶಿಕ್ಷೆ ಕಡಿಮೆ ಆಗುತ್ತೆ ಅನ್ನೋದು ಗೊತ್ತಿಲ್ಲ. ನಿಮಗೆ ವಕೀಲರನ್ನು ನೇಮಕ ಮಾಡಲಾಗಿದೆ. ಅವರ ಜೊತೆಗೆ ಚರ್ಚಿಸಿ ತಿಳಿಸಿ ಎಂದು ಸೂಚನೆ ನೀಡಿದರು.


2013ರ ನವೆಂಬರ್ 19ರಂದು ಮುಂಜಾನೆ ಬೆಂಗಳೂರಿನ ಕಾರ್ಪೊರೇಷನ್ ಬ್ಯಾಂಕ್ ಸರ್ಕಲ್‌ನಲ್ಲಿ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆದಿತ್ತು. ಮಗಳ ಹುಟ್ಟು ಹಬ್ಬಕ್ಕೆ ಉಡುಗೊರೆ ಖರೀದಿ ಮಾಡಲು ಹಣ ಡ್ರಾ ಮಾಡಲು ಜ್ಯೋತಿ ಉದಯ್ ಎಟಿಎಂಗೆ ಹೋಗಿದ್ದರು. ಆಗ ಅವರ ಮೇಲೆ ಮಧುಕರ್ ರೆಡ್ಡಿ ಮಾರಣಾಂತಿಕ ಹಲ್ಲೆ ಮಾಡಿದ್ದ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ