ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಜೀವ ಇರುವವರೆಗೂ ರಾಯಣ್ಣ ಬ್ರಿಗೇಡ್ ಒಪ್ಪಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಆತುರದ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಅವರು ಕೆಜೆಪಿ ಪಕ್ಷ ಕಟ್ಟಿದಾಗಲ್ಲೂ ನನ್ನ ಉಸಿರು ಇರೋವರೆಗೂ ಬಿಜೆಪಿಗೆ ಮರಳಿ ಬರಲ್ಲ ಎಂದಿದ್ದರು. ಆದರೆ, ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ ಬಳಿಕ ಅವರ ನಿಲುವು ಬದಲಾಯಿತು ಎಂದು ಟಾಂಗ್ ನೀಡಿದರು.
ರಾಷ್ಟ್ರೀಯ ನಾಯಕರೊಂದಿಗೆ ಚರ್ಚೆ ನಡೆದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಬದಲಾಗಲಿದೆ. ಪದೇ ಪದೇ ಶಿಸ್ತು ಕ್ರಮ ಎಂದು ಹೇಳಿ, ಆ ಪದದ ಬೆಲೆ ಕಳೆಯಬೇಡಿ ಎಂದು ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯ ಬಿಜೆಪಿ ಪಾಳಯದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತದೆ ಎಂಬ ಕಾರಣಕ್ಕಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಿನ ಹೊಸ ಸಂಘಟನೆ ಹುಟ್ಟು ಹಾಕುವ ಮೂಲಕ ಪಕ್ಷದಲ್ಲಿ ತಮ್ಮ ಬಲ ಪ್ರದರ್ಶನ ಮಾಡಲು ಕೆ.ಎಸ್.ಈಶ್ವರಪ್ಪ ಮುಂದಾಗಿದ್ದರು. ಆದರೆ, ರಾಯಣ್ಣ ಬ್ರಿಗೇಡ್‌ಗೆ ಬಿ.ಎಸ್.ಯಡಿಯೂರಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.