ಡಾ.ಸುಧೀಂದ್ರ ಹಾಲ್ದೊಡ್ಡೇರಿ ನಿಧನಕ್ಕೆ ಉಪ ಮುಖ್ಯಮಂತ್ರಿ ಕಂಬನಿ

ಶುಕ್ರವಾರ, 2 ಜುಲೈ 2021 (18:12 IST)
ಬೆಂಗಳೂರು: ಖ್ಯಾತ ವಿಜ್ಞಾನಿ, ಅಂಕಣಕಾರ ಡಾ.ಸುಧೀಂದ್ರ ಹಾಲ್ದೊಡ್ಡೇರಿ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಕಂಬನಿ ಮಿಡಿದ್ದಾರೆ. 
 
ವಿಜ್ಞಾನವನ್ನು ಕನ್ನಡಿಗರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಬರೆದ ಸುಧೀಂದ್ರ ಅವರು, ಮಕ್ಕಳಲ್ಲಿ ವಿಜ್ಞಾನದ ಮೇಲಿನ ಪ್ರೇಮ ಹೆಚ್ಚಿಸಿದವರು. ಜತೆಗೆ, ಕರ್ನಾಟಕದಲ್ಲಿ ವಿಜ್ಞಾನದ ಬೆಳವಣಿಗೆಗೆ ಅವರ ಕಾಣಿಕೆ ಬಹಳ ದೊಡ್ಡದು ಎಂದು ಡಿಸಿಎಂ ಶೋಕ ವ್ಯಕ್ತಪಡಿಸಿದ್ದಾರೆ. 
 
ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ  ವಿಜ್ಞಾನಿಯಾಗಿ ಅನುಪಮ ಸೇವೆ ಸಲ್ಲಿಸಿದ್ದ ಅವರು, ಅನೇಕ ಪ್ರಮುಖ ಸಂಶೋಧನೆಗಳಲ್ಲಿ ಭಾಗಿಯಾಗಿದ್ದರು. ತಮ್ಮ ಅನುಭವವನ್ನು ಹೊಸ ತಲೆಮಾರಿನ ಸಂಶೋಧಕರಿಗೆ ಧಾರೆ ಎರೆಯುತ್ತಾ ವಿಜ್ಞಾನಕ್ಕೆ ಬದುಕನ್ನೇ ಅರ್ಪಿಸಿಕೊಂಡಿದ್ದರು ಎಂದು ಡಾ.ಅಶ್ವತ್ಥನಾರಾಯಣ ಗುಣಗಾನ ಮಾಡಿದ್ದಾರೆ. 
 
ಡಾ.ಸುಧೀಂದ್ರ ಹಾಲ್ದೊಡ್ಡೇರಿ ಅವರ ನಿಧನ ಬಹಳ ದುಃಖ ಉಂಟು ಮಾಡಿದೆ. ಅವರಿಗೆ ಭಗವಂತ ಚಿರಶಾಂತಿ ದಯಪಾಲಿಸಲಿ ಹಾಗೂ ಅವರ ಬಂಧುಬಳಗಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಡಿಸಿಎಂ ಅವರು ಪ್ರಾರ್ಥನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ