ಕಮ್ಮನಹಳ್ಳಿ ನಾಲ್ವರು ಕಾಮುಕರು ಅಂದರ್: ಪೊಲೀಸ್ ಆಯುಕ್ತ

ಗುರುವಾರ, 5 ಜನವರಿ 2017 (17:12 IST)
ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಾದ ಅಯ್ಯಪ್ಪ, ಲೀನೋ, ಸೋಮಶೇಖರ್ ಅಲಿಯಾಸ್ ಚಿನ್ನಿ ಮತ್ತು ಸುದೇಶ್‌ನನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ. 
 
ಲೈಂಗಿಕ ಕಿರುಕುಳಕ್ಕೊಳಗಾದ ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಈಗಾಗಲೇ ಆಕೆ ತುಂಬಾ ನೊಂದಿದ್ದಾಳೆ. ಮತ್ತಷ್ಟು ಅವಳನ್ನು ನೋಯಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ.
 
ಯಾರಾದರೂ ಅಸಭ್ಯ ವರ್ತನೆ ತೋರಿದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಾರೆ ಎಂದು ಜನೆವರಿ 2 ರಂದು ಮಹಿಳೆಯರಿಗೆ ಮನವಿ ಮಾಡಿದ್ದೇನೆ ಎಂದರು.
 
ಆರೋಪಿಗಳಲ್ಲಿ ಕೆಲವರು ಡೆಲೆವರಿ ಬಾಯ್ಸ್‌ಗಳಿದ್ದು, ಅಯ್ಯಪ್ಪ ಐಟಿಐ ಓದುತ್ತಿದ್ದು, ಲೀನೋ ಬಿಕಾಂ ಪದವಿ ಮಾಡುತ್ತಿದ್ದಾನೆ. ಸುದೇಶ್ ಪಿಯುಸಿ ಓದುತ್ತಿದ್ದಾನೆ ಎಂದು ತಿಳಿಸಿದ್ದಾರೆ. 
 
ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಅವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು. ಆರೋಪಿಗಳಿಂದ ಒಂದು ಬೈಕ್ ಸೀಜ್ ಮಾಡಲಾಗಿದೆ. ಇನ್ನೊಂದು ಬೈಕ್ ಸೀಜ್ ಮಾಡಬೇಕಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ