ಕೊಪ್ಪಳ: ಬಯಲು ಸೀಮೆಯ ರೈತರ ಜೀವನಾಡಿಯಾಗಿದ್ದ ತುಂಗಭದ್ರಾ ಡ್ಯಾಮ್ ಚೈನ್ ಕಟ್ ಆಗಿ ಈಗ ಅಪಾಯದ ಪರಿಸ್ಥಿತಿಯಿದ್ದು ಇಂದು ಬಿಜೆಪಿ ನಾಯಕರ ನಿಯೋಗ ಡ್ಯಾಮ್ ಬರಳಿ ತೆರಳಿ ಪರಿಶೀಲನೆ ನಡೆಸಿದೆ.
ವಿಪಕ್ಷ ನಾಯಕ ಆರ್ ಅಶೋಕ್, ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರ ದಂಡು ಇಂದು ತುಂಗಭದ್ರಾ ಡ್ಯಾಮ್ ಗೆ ತೆರಳಿ ಪರಿಶೀಲನೆ ನಡೆಸಿದೆ. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳು, ಜನರು ಸೇರಿದ್ದರು.
ತುಂಗಭದ್ರಾ ಡ್ಯಾಮ್ ಚೈನ್ ಕಟ್ ಆಗಿರುವುದರಿಂದ ಸಾಕಷ್ಟು ನೀರು ಹರಿದುಹೋಗುತ್ತಿದ್ದು, ಸುತ್ತಮುತ್ತಲ ಪ್ರದೇಶದ ಜನರಿಗೆ ನೆರೆ ಭೀತಿ ಎದುರಾಗಿದೆ. ಕೇವಲ ಕರ್ನಾಟಕ ಮಾತ್ರವಲ್ಲ, ನೆರೆ ರಾಜ್ಯವಾದ ತೆಲಂಗಾಣದ ರೈತರಿಗೂ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚೈನ್ ದುರಸ್ಥಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ತುಂಗಭದ್ರಾ ಡ್ಯಾಮ್ 100 ಟಿಎಂಸಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಆದರೆ ಈಗ ಭಾರೀ ಮಳೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಇದರ ಬೆನ್ನಲ್ಲೇ ಚೈನ್ ಕಟ್ ಆಗಿರುವುದರಿಂದ ಸಾಕಷ್ಟು ನೀರು ಪೋಲಾಗುತ್ತಿದೆ. ನಾಳೆ ಸಿಎಂ ಸಿದ್ದರಾಮಯ್ಯ ಕೂಡಾ ಇಲ್ಲಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.