ಬೆಂಗಳೂರು: ಇತ್ತೀಚೆಗೆ ನಂದಿನಿ ಹಾಲಿನ ದರ ಏರಿಕೆ ಮಾಡಿರುವ ಕೆಎಂಎಫ್ ನಿರ್ಧಾರ ಖಂಡಿಸಿ ಇಂದು ರಾಜ್ಯ ಬಿಜೆಪಿ ಘಟಕ ಪ್ರತಿಭಟನೆ ನಡೆಸಲಿದೆ. ಇಂದು ಫ್ರೀಡಂ ಪಾರ್ಕ್ ನಲ್ಲಿಪ್ರತಿಭಟನೆ ನಡೆಯಲಿದೆ.
ಹಾಲಿನ ದರ ಏರಿಕೆ ಮಾಡಿದ ಕಾಂಗ್ರೆಸ್ ಸರಕಾರದ ವಿರುದ್ಧ ಇಂದು ಬೆಳಿಗ್ಗೆ 11.00 ಗಂಟೆಗೆ “ಸ್ವಾತಂತ್ರ್ಯ ಉದ್ಯಾನವನ”ದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ಪ್ರಕಟಣೆ ನೀಡಿದೆ.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ್, ವಿಧಾನಪರಿಷತ್ ಸದಸ್ಯರಾದ ಶ್ರೀ ಎನ್. ರವಿಕುಮಾರ್, ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ ಎ.ಎಸ್. ಪಾಟೀಲ್ ನಡಹಳ್ಳಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಶ್ರೀ ಸಿ.ಕೆ. ರಾಮಮೂರ್ತಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎಂ. ರುದ್ರೇಶ್ ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ನಿನ್ನೆಯಷ್ಟೇ ಬಿಜೆಪಿ ವಾಲ್ಮೀಕಿ ನಿಗಮದ ಅಕ್ರಮ ವಿಚಾರವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಅದು ಇಂದೂ ಮುಂದುವರಿದಿದೆ. ಇದರ ನಡುವೆ ನಂದಿನಿ ಹಾಲಿನ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ.