ಬೆಂಗಳೂರು:ಕರ್ನಾಟಕದ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದೆ. ಮುಂದಿನ ತಿಂಗಳು 7ರಂದು ಮುಖ್ಯಮಂತ್ರಿ ಮತ್ತು ಹಣಕಾಸು ಮಂತ್ರಿಯೂ ಆಗಿರುವ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. 2025ನೇ ಸಾಲಿನ ಮೊದಲ ಅಧಿವೇಶನ ಮಾರ್ಚ್ 3ರಂದು ಆರಂಭವಾಗಲಿದೆ. 7ರಂದು ಬಜೆಟ್ ಮಂಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಅಧಿವೇಶನದ ಮೊದಲ ದಿನ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ. ಬಳಿಕ ಅವರ ಭಾಷಣದ ಮೇಲೆ ಚರ್ಚೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಎಷ್ಟು ದಿನ ಅಧಿವೇಶನ ನಡೆಸಬೇಕು ಅನ್ನೋದನ್ನು ಕಲಾಪ ಸಲಹಾ ಸಮಿತಿ ನಿರ್ಧಾರ ಮಾಡಲಿದೆ. ನನಗೆ ಕಾಲು ನೋವು ಇದ್ದರೂ ಮನೆಯಲ್ಲಿ ಕುಳಿತು ಬಜೆಟ್ ಸಿದ್ಧತೆ ಕುರಿತು ಇಲಾಖೆಗಳ ಸಭೆ ನಡೆಸಿದ್ದೇನೆ ಎಂದರು.
ನಮ್ಮ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ಹಿಂದೆ ಬಿದ್ದಿಲ್ಲ. ಕೃಷಿಕರಿಗೆ ಪೂರಕವಾಗಿ ಇರುತ್ತೇನೆ ಎಂಬ ಮಾತು ಕೊಡುತ್ತೇನೆ. ಬಜೆಟ್ ಮಾಡುವಾಗ ನಮ್ಮ ಇತಿಮಿತಿಯಲ್ಲಿ ಏನು ಸೇರಿಸಬೇಕು ಎಂಬ ಬಗ್ಗೆ ಚರ್ಚೆ ಆಗಿದೆ. ಬೆಲೆ ಏರಿಕೆ ನಿಯಂತ್ರಣ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ಮಾಡಬೇಕು. ರಾಜ್ಯ ಸರ್ಕಾರದ ಕಡೆಯಿಂದ ಬೆಲೆ ಏರಿಕೆ ನಿಯಂತ್ರಿಸಲು ಏನು ಮಾಡಬೇಕೊ ಅದು ಮಾಡುತ್ತೇವೆ ಎಂದಿದ್ದಾರೆ.