ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಕರ್ನಾಟಕ ಉದ್ಯಮಿ ಬಲಿ: ಪ್ರವಾಸಕ್ಕೆಂದು ತೆರಳಿದ್ದ ಕುಟುಂಬ

Sampriya

ಮಂಗಳವಾರ, 22 ಏಪ್ರಿಲ್ 2025 (19:25 IST)
Photo Courtesy X
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್‌ ರಾವ್‌ (47) ಮೃತಪಟ್ಟಿದ್ದಾರೆ.  ಅವರು ಕುಟುಂಬದ ಸದಸ್ಯರೊಂದಿಗೆ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದರು.

ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕುಣಿಮಕ್ಕಿ ಮೂಲದ ಮಂಜುನಾಥ್‌ ರಾವ್‌ ಅವರು ತಂದೆ ಶಿವಮೊಗ್ಗದ ಮ್ಯಾಮ್ ಕೋಸ್‌ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದರು. ಹಾಗಾಗಿ 20 ವರ್ಷಗಳ ಹಿಂದೆಯೇ ಕುಟುಂಬಸ್ಥರೊಂದಿಗೆ ಶಿವಮೊಗ್ಗಕ್ಕೆ ತೆರಳಿದ್ದ ಮಂಜುನಾಥ್‌ ತಂದೆ ನಿವೃತ್ತಿ ಬಳಿಕ ಅಲ್ಲೇ ಸೆಟಲ್‌ ಆಗಿದ್ದರು. ಅವರು ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ತೊಡಗಿದ್ದರು. ಪತ್ನಿ ಕಡೂರು ತಾಲೂಕಿನ ಬೀರೂರು ಮ್ಯಾಮ್ ಕೋಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.  

ಏಪ್ರಿಲ್‌ 19ರಂದು ಮಂಜುನಾಥ್‌ ರಾವ್‌ ಅವರು ತಮ್ಮ ಪತ್ನಿ, ಮಗನನ್ನು ಕರೆದುಕೊಂಡು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ಮಗನ ಪಿಯುಸಿ ಪರೀಕ್ಷೆ ಮುಗಿದ ಬೆನ್ನಲ್ಲೇ 6 ದಿನಗಳ ಪ್ಯಾಕೇಜ್‌ ಪ್ರವಾಸ ಕೈಗೊಂಡಿದ್ದರು. ಎರಡು ದಿನಗಳ ಹಿಂದೆ ಸಂಬಂಧಿ ಅಶೋಕ್‌ಗೆ ಕರೆ ಮಾಡಿದ್ದ ಮಂಜುನಾಥ್‌ ಏ.24ರಂದು ವಾಪಸ್‌ ಬರುವುದಾಗಿ ಹೇಳಿದ್ದರು.  ಆದರೆ, ಗುಂಡಿನ ದಾಳಿಗೆ ಅವರು ಬಲಿಯಾಗಿದ್ದಾರೆ.

 ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ