ಬೆಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಹಲವು ಕಡೆಗೆ ರಸ್ತೆಗಳು ಬಂದ್ ಆಗಿದ್ದು ಜನ ಜೀವನ ಅಸ್ತವ್ಯವಸ್ತವಾಗಿದೆ. ಕರಾವಳಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಪ್ರವಾಹ ಸದೃಶ ವಾತಾವರಣವಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ಶೃಂಗೇರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಪ್ಯಾರಲ್ ರಸ್ತೆ ಬಂದ್ ಆಗಿದೆ. ತುಂಗಾ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಸದ್ಯಕ್ಕೆ ಈ ಭಾಗಕ್ಕೆ ಪ್ರಯಾಣ ಮಾಡುವುದು ಸುರಕ್ಷಿತವಲ್ಲ.
ಕರಾವಳಿ ಜಿಲ್ಲೆಯಲ್ಲೂ ಎಡೆಬಿಡದೇ ಮಳೆ ಸುರಿಯುತ್ತಿದೆ. ಪರಿಣಾಮ ಇಂದೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಇದಲ್ಲದೆ ಇಂದು ಬೆಂಗಳೂರು ಗ್ರಾಮಾಂತರ, ನಗರ, ಧಾರವಾಡ, ಕೊಪ್ಪಳ, ಚಿಕ್ಕಬಳ್ಳಾಪುರ, ಗದಗ, ಹಾವೇರಿ, ಕೋಲಾರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಜಿಲ್ಲೆಗಳಲ್ಲೂ ಮಳೆಯಾಗುವ ಮುನ್ಸೂಚನೆಯಿದೆ. ಬೆಂಗಳೂರಿನಲ್ಲಿ ಯಥಾವತ್ತು ಮೋಡ ಕವಿದ ವಾತಾವರಣವಿದ್ದು ಗರಿಷ್ಠ ಉಷ್ಣಾಂಶ ಎಚ್ಎಎಲ್ ನಲ್ಲಿ 25 ಡಿಗ್ರಿಯಷ್ಟು ದಾಖಲಾಗಿದೆ. ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.