ಪುನೀತ್ ರಾಜಕುಮಾರ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ
ಮಂಗಳವಾರ, 16 ನವೆಂಬರ್ 2021 (18:29 IST)
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಈ ದೇಶದ ಇತಿಹಾಸ ಬಹಳ ದೊಡ್ಡದಿದೆ. ಆದರೆ, ಮನುಷ್ಯರ ಚಾರಿತ್ರ್ಯ ತುಂಬಾ ಚಿಕ್ಕದಾಗಿದೆ. ಪುನೀತ್ ರಾಜಕುಮಾರ್ ಅವರು ಬಹುದೊಡ್ಡ ಚಾರಿತ್ರ್ಯದೊಂದಿಗೆ ಈ ದೇಶದ ಇತಿಹಾಸ ಸೇರಿದ್ದಾರೆ. ಮುತ್ತುರಾಜನ ಮುತ್ತು ಇಂದು ದೈಹಿಕವಾಗಿ ನಮ್ಮನ್ನು ಅಗಲಿದರು ಅವರ ಚಾರಿತ್ರ್ಯ ಎಂದಿಗೂ ಅಜರಾಮರವಾಗಿರಲಿದೆ. ಅವರ ಸೇವೆ, ಉದಾತ್ತ ಮಾನವೀಯ ಕಳಕಳಿಗೆ ರಾಜ್ಯ ಸರ್ಕಾರ ಆರು ಕೋಟಿ ಕನ್ನಡಿಗರ ಪರವಾಗಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಿದೆ ಎಂದು ಘೋಷಿಸಿದರು. ಪ್ರಶಸ್ತಿ ಘೋಷಿಸುತ್ತಿದ್ದಂತೆ ನೆರೆದಿದ್ದ ಎಲ್ಲರೂ ಎದ್ದು ನಿಂತು ಕರತಾಡತನ ಮೊಳಗಿಸಿದರು.
ಪುನೀತ್ ರಾಜ್ ಕುಮಾರ್ ಅವರು ಡಾ ರಾಜ್ ಕುಮಾರ್ ಅವರ ಆದರ್ಶಗಳನ್ನು ಚಾಚೂ ತಪ್ಪದೆ ಪಾಲಿಸಿ ಎಲ್ಲರನ್ನೂ ಅವರು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದರು. ಸೂರ್ಯ ಚಂದ್ರ ಇರುವವರೆಗೂ ಪುನೀತ್ ರಾಜಕುಮಾರ್ ಅವರು ಚಿರಸ್ಥಾಯಿಯಾಗಿರುತ್ತಾರೆ ಕರ್ನಾಟಕ ರತ್ನವಾಗಿ ಮಿಂಚುತ್ತಿರುತ್ತಾರೆ. ಎಲ್ಲರ ಹೃದಯದಲ್ಲೂ ಅವರು ನೆಲೆಸುತ್ತಾರೆ ಎಂದು ಅವರು ಭಾವುಕರಾಗಿ ನುಡಿದರು.