ಬೆಂಗಳೂರು: ರಾಜ್ಯಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಕೆಲವು ಕಡೆ ಮಳೆಯಾಗುತ್ತಿದೆ. ಆದರೆ ಇಂದು ಕೆಲವೇ ಜಿಲ್ಲೆಗಳನ್ನು ಬಿಟ್ಟು ಉಳಿದೆಡೆ ಬಿಸಿಲಿನ ವಾತಾವರಣವಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ವಾರಂತ್ಯಕ್ಕೆ ಭಾರೀ ಮಳೆಯಾಗಿತ್ತು. ಅದಾದ ಬಳಿಕ ಈಗ ವರುಣ ತಕ್ಕಮಟ್ಟಿಗೆ ಸೈಲೆಂಟಾಗಿದ್ದಾನೆ. ಇಂದೂ ಕೂಡಾ ಬೆಂಗಳೂರಿನಲ್ಲಿ ಮಳೆಯ ಅಬ್ಬರವಿರಲ್ಲ. ಬದಲಾಗಿ ಬಿಸಿಲಿನ ವಾತಾವರಣ ಕಂಡುಬರುವುದು.
ಆದರೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಗದಗ, ಹಾಸನ, ಕೋಲಾರ, ಕೊಡಗು, ಮೈಸೂರು, ಕೊಪ್ಪಳ, ಬೀದರ್, ಹಾವೇರಿ, ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಚಾಮರಾಜನಗರ, ರಾಮನಗರ, ಮಂಡ್ಯ, ಚಿತ್ರದುರ್ಗ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ, ದಾವಣಗೆರೆ, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ರಾಯಚೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬಳ್ಳಾರಿ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಕಂಡುಬರುವುದು.