ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ, ಮೋಡ ಕವಿದ ವಾತಾವರಣವಿದೆ. ಇಂದೂ ಕೂಡಾ ಕೆಲವು ಜಿಲ್ಲೆಗಳಿಗೆ ಮಳೆಯ ಸೂಚನೆಯಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಇಂದು ಮಳೆಯಾಗಬಹುದು ನೋಡಿ.
ಮಳೆಯ ಹೊರತಾಗಿಯೂ ರಾಜ್ಯದಲ್ಲಿ ತಾಪಮಾನವೇನೂ ಕಡಿಮೆಯಾಗಿಲ್ಲ. ಗರಿಷ್ಠ ತಾಪಮಾನ ಸರಾಸರಿ 32-34 ರ ಆಸುಪಾಸಿನಲ್ಲಿದೆ. ಒಂದೆಡೆ ಮಳೆ, ಇನ್ನೊಂದೆಡೆ ಬಿಸಿಲಿನ ಕಾವು ಇದರ ನಡುವೆ ಜನರು ಸುಸ್ತಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರದಿಂದಲೇ ಆರಂಭವಾಗಿದ್ದ ಮಳೆ ನಿನ್ನೆಯವರೆಗೂ ಮುಂದುವರಿದಿತ್ತು. ಆದರೆ ಇನ್ನೆರಡು ದಿನಗಳಿಗೆ ಈ ಜಿಲ್ಲೆಯಲ್ಲಿ ಕೊಂಚ ವರುಣ ಬಿಡುವು ನೀಡುವ ಸಾಧ್ಯತೆಯಿದೆ. ಉಡುಪಿಯಲ್ಲೂ ಇಂದು ಮಳೆಯ ಸಾಧ್ಯತೆಯಿಲ್ಲ. ಆದರೆ ಕೊಡಗು, ಚಿಕ್ಕಮಗಳೂರು, ಹಾಸನ, ಹಾವೇರಿ, ಬಳ್ಳಾರಿ ಜಿಲ್ಲೆಗಳಲ್ಲಿ ಇಂದು ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.
ಉಳಿದಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಕೊಂಚ ಕ್ಷೀಣವಾಗಿದೆ. ಮಂಗಳವಾರ ಮತ್ತು ಬುಧವಾರ ಸುರಿದಿದ್ದ ಮಳೆ ನಿನ್ನೆಗೆ ಕ್ಷೀಣವಾಗಿತ್ತು. ಇಂದೂ ಕೂಡಾ ಮೋಡ ಕವಿದ ವಾತಾವರಣ ಮತ್ತು ಕೆಲವು ಕಡೆ ತುಂತುರು ಹನಿಯಾಗುವ ಸಾಧ್ಯತೆಯಿದೆ.