ಕಾವೇರಿ ಹೋರಾಟ ಮತ್ತಷ್ಟು ತೀವ್ರ, ಪ್ರತಿಭಟನೆಗೆ ತಾರಾ ಮೆರುಗು

ಗುರುವಾರ, 8 ಸೆಪ್ಟಂಬರ್ 2016 (10:29 IST)
ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ಬಳಿಕ ರಾಜ್ಯಾದ್ಯಂತ ಕಾವೇರಿ ಹೋರಾಟ ತೀವ್ರಗೊಳ್ಳುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಹೋರಾಟಗಾರರು ಪ್ರತಿಭಟನೆ ವ್ಯಕ್ತಪಡಿಸಿದರು. ಜಯಲಲಿತಾ ಹಠಮಾರಿ ಧೋರಣೆ  ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ 15ಕ್ಕೂ ಹೆಚ್ಚು ಲಾರಿಗಳನ್ನು ತಡೆದು ಪ್ರತಿಭಟನೆ ವ್ಯಕ್ತಪಡಿಸಿದರು.

ರಾಜ್ಯಸರ್ಕಾರ ತಕ್ಷಣ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಈ ನಡುವೆ ಪ್ರತಿಭಟನೆಗೆ ತಾರಾಮೆರಗು ಕೂಡ ಸೇರಿದ್ದು, ನಟ, ನಿರ್ದೇಶಕ ಜೋಗ್ ಪ್ರೇಮ್ ಕೂಡ ಪಾಲ್ಗೊಂಡಿದ್ದಾರೆ. ಪ್ರೇಮ್ ಜತೆ ಗಾಂಧಿ ನಗರದ ಚಿತ್ರತಂಡ ಪ್ರತಿಭಟನೆಯಲ್ಲಿ ಭಾಗಿಯಾಗಿದೆ.  ಈ ನಡುವೆ ರೈತರನ್ನು ಸಮಾಧಾನಪಡಿಸಲು ರೈತರ ಜಮೀನುಗಳಿಗೆ ನಾಲೆಗಳಿಂದ ನೀರನ್ನು ಹರಿಸಲಾಗುತ್ತಿದೆ.

 
ಈಗ ಲಭ್ಯವಿರುವ ಮಾಹಿತಿ ಪ್ರಕಾರ ನಾಲೆಗಳಿಗೆ 5000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆಯೆಂದು ತಿಳಿದುಬಂದಿದೆ. ಆದರೆ ಮುಂದೆ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಸರ್ಕಾರ ಹೇಗೆ ನಿಭಾಯಿಸುತ್ತದೆ ಎನ್ನುವುದೇ ಪ್ರಶ್ನಾರ್ಥಕವಾಗಿದೆ.

ಈ ನಡುವೆ ಕಾವೇರಿಗೆ ಹೇಮಾವತಿ ನೀರು ಹರಿಸಿದ್ದಕ್ಕೆ ಶಾಸಕ ಎಚ್.ಡಿ. ರೇವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರೇವಣ್ಣ ಇತರೆ ಶಾಸಕರೊಂದಿಗೆ ಡಿಸಿ ಕಚೇರಿಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದು, ಇಂದು ಹೇಮಾವತಿ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಿದರು. ಅಹಿತಕರ ಘಟನೆ ನಡೆದರೆ ಜಿಲ್ಲಾಡಳಿತವೇ ಹೊಣೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ