ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಅಂತಿಮಗೊಂಡರೂ ಒಳಬೇಗುದಿ ಮತ್ತಷ್ಟು ಹೆಚ್ಚಾಗಿದೆ. ಸಚಿವ ಕೆ.ಎಚ್. ಮುನಿಯಪ್ಪ ಅವರ ಅಳಿಯ ಚಿಕ್ಕಪೆದ್ದಣ್ಣ (ಎಡಗೈ) ಅವರಿಗೆ ಟಿಕೆಟ್ ನೀಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಐವರು ಕಾಂಗ್ರೆಸ್ ಶಾಸಕರು ಬೆದರಿಕೆ ಹಾಕಿದ್ದಾರೆ.
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರ ಭೇಟಿಗೆ ಸಮಯಾವಕಾಶ ಪಡೆದಿರುವ ಸಚಿವ ಎಂ.ಸಿ ಸುಧಾಕರ್, ಶಾಸಕ ಕೊತ್ತನೂರು ಮಂಜುನಾಥ್ ಹಾಗೂ ಕೆ.ವೈ. ನಂಜೇಗೌಡ ಅವರು ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದಾರೆ. ಆದರೆ, ಈ ಮಧ್ಯೆ ಖಾದರ್ ಅವರೇ ಬೆಂಗಳೂರಿಗೆ ಬರಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಹಾಗೂ ನಜೀರ್ ಅಹಮ್ಮದ್ ಕೂಡಾ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಗೆ ಭೇಟಿ ನೀಡಿದಾಗ ಹೈಡ್ರಾಮಾ ನಡೆಯಿತು. ಮಧ್ಯಪ್ರವೇಶಿಸಿದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಶಾಸಕರ ಮನವೊಲಿಕೆಗೆ ಯತ್ನಿಸಿದರು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಎಐಸಿಸಿ ಅಧ್ಯಕ್ಷರ ಸೂಚನೆಯ ಮೇರೆಗೆ ತಾನು ಬಂದಿರುವುದಾಗಿ ಸಚಿವ ಬೈರತಿ ತಿಳಿಸಿ, ರಾಜೀನಾಮೆ ನೀಡದಂತೆ ತಡೆದರು.
ಸಂಧಾನ ವಿಫಲ: ಇದಕ್ಕೂ ಮುನ್ನ ಸಚಿವ ಬೈರತಿ ಸುರೇಶ್ ಅವರು ತಮ್ಮ ಮನೆಯಲ್ಲಿ ಶಾಸಕರ ಜೊತೆ ಸಂಧಾನ ಸಭೆ ನಡೆಸಿದ್ದಾರೆ. ಆದರೆ, ಆ ಸಭೆ ವಿಫಲವಾಗಿದೆ ಎಂದು ಗೊತ್ತಾಗಿದೆ. ಯಾವುದೇ ಕಾರಣಕ್ಕೂ ಮುನಿಯಪ್ಪ ಅವರ ಕುಟುಂಬದವರಿಗೆ ಟಿಕೆಟ್ ನಿಡಬಾರದು ಎಂದು ಎಲ್ಲ ಐದು ಶಾಸಕರು ಪಟ್ಟು ಬಿಗಿಗೊಳಿಸಿದ್ದಾರೆ.
ಈ ಮಧ್ಯೆ ಮಾತನಾಡಿರುವ ಸಚಿವ ಕೆ. ಎಚ್. ಮುನಿಯಪ್ಪ, 'ಇಂದು ಸಂಜೆ ಟಿಕೆಟ್ ಘೋಷಣೆ ಆಗಬಹುದು. ರಮೇಶ್ ಕುಮಾರ್ ಆದಿಯಾಗಿ ಎಲ್ಲರ ಜೊತೆಗೆ ಚರ್ಚೆ ಮಾಡಿದ್ದೇವೆ. ಕೊತ್ತನೂರು ಮಂಜುನಾಥ, ನಂಜೇಗೌಡ, ಅನಿಲ್ ಕುಮಾರ್ ಸೇರಿ ಎಲ್ಲರ ಜೊತೆಗೆ ಚರ್ಚೆ ಮಾಡಿದ್ದೇನೆ' ಎಂದಿದ್ದಾರೆ.
ಕೆಲವು ಶಾಸಕರ ರಾಜೀನಾಮೆ ನೀಡುತ್ತೇವೆ ಎಂಬ ಬೆದರಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ಅಭ್ಯರ್ಥಿ ಯಾರಾಗಬೇಕು ಎಂಬುದು ರಮೇಶ್ ಕುಮಾರ್ ಹಾಗೂ ಸಚಿವರ ಉಪಸ್ಥಿತಿಯಲ್ಲೇ ಆಗಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದವಾಗಿದ್ದೇವೆ. ರಮೇಶ್ ಕುಮಾರ್, ಮಾಲೂರು ನಂಜೇಗೌಡ ಎಲ್ಲರಿಗೂ ಮನವಿ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೇಟ್ ಕೊಟ್ಡರೂ ಗೆಲ್ಲಿಸುತ್ತೇವೆ ಎಂದಿದ್ದೇವೆ. ಇದಕ್ಕೆ ಮುಂದಾಳತ್ವ ರಮೇಶ್ ಕುಮಾರ್ ಅವರದೇ ಎಂದರು.