ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮೇಲೆ ಹಲ್ಲೆ ಯತ್ನ..?

ಬುಧವಾರ, 5 ಜುಲೈ 2017 (17:14 IST)
ಬೆಂಗಳೂರಿನ ಏಟ್ರಿಯಾ ಹೋಟೆಲ್`ನಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮೇಲೆ ಹಲ್ಲೆಗೆ ಯತ್ನ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಎನ್`ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಬೆಂಗಳೂರಿಗೆ ಆಗಮಿಸಿದ್ದರು. ಕೋವಿಂದ್ ಕೋಲಿ ಸಮಾಜಕ್ಕೆಸೇರಿದವರಾಗಿರುವುದರಿಂದ ಕೋವಿಂದ್ ಅವರನ್ನ ಭೇಟಿ ಮಾಡಲು ಕೋಲಿ ಸಮಾಜದ ಮುಖಂಡರು ಆಗಮಿಸಿದ್ದರು. ಆದರೆ, ಕೋಲಿ ಸಮಾಜದ ಮುಖಂಡರ ಭೇಟಿಗೆ ಅವಕಾಶ ನೀಡಲಿಲ್ಲ ಎಂದು ಕೋಲಿ ಸಮಾಜದ ಮುಖಂಡರು ಅರವಿಂದ ಲಿಂಬಾವಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅರವಿಂದ ಲಿಂಬಾವಳಿ ಜೊತೆ ಕೋಲಿ ಸಮಾಜದ ಮುಖಂಡರು ಮಾತಿನ ಚಕಮಕಿ ನಡೆಸಿ ತಳ್ಳಾಟ ನೂಕಾಟ ಸಹ ನಡೆದಿದೆ. ರಾಮನಾಥ್ ಕೋವಿಂದ್ ಅವರ ಭೇಟಿಗೆ ನಮಗೆ ಅವಕಾಶ ನೀಡಲಿಲ್ಲ. ಹೂಗುಚ್ಚ ಕೊಡಲೂ ಸಹ ಻ವಕಾಶ ಕೊಡಲಿಲ್ಲ ಎಂದು ಕಿಡಿ ಕಾರಿದರು. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಅರವಿಂದ ಲಿಂಬಾವಳಿ, ರಾಮನಾಥ್ ಕೋವಿಂದ್ ತೆರಳಬೇಕಿದ್ದ ವಿಮಾನದ ಸಮಯ ವ್ಯತ್ಯಾಸವಾಗಿದ್ದರಿಂದ ಬಹು ಬೇಗ ಹೊರಡಬೇಕಾಯ್ತು. ಕೋವಿಂದ್ ಅವರೇ ಹೇಳಿದ್ದರಿಂದ ಭೇಟಿಗೆ ಅವಕಾಶ ನೀಡಿಲ್ಲ. ಭೇಟಿಗೆ ಅವಕಾಶ ಸಿಗಲಿಲ್ಲವೆಂದು ನಿರಾಸೆಗೊಂಡು ಈ ರೀತಿ ವರ್ತಿಸಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ