ಮಹಾನಗರದಲ್ಲಿ ಭದ್ರತೆ ಸುಮಾರು 10 ಸಾವಿರ ಪೇದೆ ಸೇರಿ ಕೆಎಸ್ ಆರ್ ಪಿ ತುಕಡಿ ನಿಯೋಜನೆ

ಶುಕ್ರವಾರ, 29 ಅಕ್ಟೋಬರ್ 2021 (21:58 IST)
ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ನಿಧನ ಹಿನ್ನೆಲೆ ಮಹಾನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಸುಮಾರು 10 ಸಾವಿರ ಪೇದೆ ಸೇರಿ ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ.
ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸರ್ಪಗಾವಲು ಕ್ರೀಡಾಂಗಣ ಸುತ್ತುವರಿದಿದೆ. ಕ್ರೀಡಾಂಗಣ ಸುತ್ತಲೂ ಸುಮಾರು 3 ಸಾವಿರ ಪೇದೆ, ಕೆಎಸ್ ಆರ್ ಪಿ ತುಕಡಿ ಭದ್ರತೆ ನೀಡಲಿದೆ.
ನಟ ಪುನೀತ್ ರಾಜ್‍ಕುಮಾರ್ ಅವರು ದೊಡ್ಡ ಅಭಿಮಾನಿಗಳ ಬಳಗ ಹೊಂದಿದ್ದರಿಂದ ಭದ್ರತೆ ನಿರ್ವಹಣೆ ಯನ್ನು ಸ್ವತಃ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವಹಿಸಿಕೊಂಡಿದ್ದಾರೆ. ಜತೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದ್ರ ಮುಖರ್ಜಿ ಭದ್ರತಾ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ.
ನಗರದಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದೆಂದು ಎಲ್ಲ ವಿಭಾಗದ ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ. ಆದ್ದರಿಂದ ನಟ ಪುನೀತ್ ರಾಜ್‍ಕುಮಾರ್ ಅಂತ್ಯಕ್ರಿಯೆ ನಡೆಯುವವರೆಗೂ ನಗರದ ಎಲ್ಲ ಪೊಲೀಸರು ಕರ್ತವ್ಯಕ್ಕೆ ಹಾಜರಾಗಲು ತಿಳಿಸಲಾಗಿದೆ. ಆಯಾ ಠಾಣಾ ವ್ಯಾಪ್ತಿಯಲ್ಲಿ ಭದ್ರತೆ ನೀಡಬೇಕು. ದಿನದ 24 ಗಂಟೆಯೂ ಗಸ್ತು ತಿರುಗಲು ಪೊಲೀಸ್ ಇಲಾಖೆ ಸೂಚಿಸಿದೆ. 
ನಟ ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಗಣ್ಯರಿಗೆ ಪ್ರತ್ಯೇಕ ದ್ವಾರದ ಮೂಲಕ ಪ್ರವೇಶ ನೀಡಲಾಗುತ್ತದೆ. ತಮ್ಮ ನೆಚ್ಚಿನ ನಟನ ಅಂತಿಮ‌ ದರ್ಶನ ಪಡೆಯಲು ಅಭಿಮಾನಿಗಳಿಗೂ ಅವಕಾಶ ನೀಡಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.
ಶುಕ್ರವಾರ ಸದಾಶಿವನಗರದ ನಟ ಪುನೀತ್ ರಾಜ್‍ಕುಮಾರ್ ಮನೆ ಮುಂದೆ ಮಾತನಾಡಿ, ಸಾರ್ವಜನಿಕ‌ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಮುಂಜಾಗ್ರತಾ ದೃಷ್ಟಿಯಿಂದ ಶುಕ್ರವಾರ ಮಧ್ಯಾಹ್ನದಿಂದ ಭಾನುವಾರ ಮಧ್ಯರಾತ್ರಿಯವರೆಗೆ ಮದ್ಯದಂಗಡಿಗಳನ್ನು ಬಂದ್ ಮಾಡಿಸಲಾಗುತ್ತಿದೆ. ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಇದಕ್ಕಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮಹಾನಗರದ ಸುತ್ತಲಿನ ಜಿಲ್ಲೆಗಳಿಂದ ಪೊಲೀಸ್ ಆಗಮನ: ನಗರದ ಭದ್ರತೆ ದೃಷ್ಟಿಯಿಂದ ರಾಮನಗರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಸೇರಿ ವಿವಿಧ ಜಿಲ್ಲೆಗಳಿಂದ ಪೊಲೀಸರನ್ನು ಬೆಂಗಳೂರಿಗೆ ಕರೆಸಲಾಗುತ್ತಿದೆ ಎಂದು ಪೊಲೀಸರೊಬ್ಬರು ತಿಳಿಸಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ