ಮಂಡ್ಯ : ಇವರ ಕುಟುಂಬದವರು ಎಲ್ಲಾ ಕಡೆ ಸ್ಪರ್ಧೆ ಮಾಡುತ್ತಿದ್ದಾರೆ. ಅವರೆಲ್ಲಾ ದ್ವೇಷದಿಂದ ಸ್ಪರ್ಧೆ ಮಾಡುತ್ತಿದ್ದಾರಾ? ಅಥವಾ ವಿರೋಧ ಪಕ್ಷದವರ ಮೇಲೆ ಪ್ರೀತಿಯಿದ್ದು ಅವರು ಗೆಲ್ಲಲಿ ಎಂದು ನಿಂತುಕೊಂಡಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ.
ನಮ್ಮ ಕುಟುಂಬ ಸುಮಲತಾ ಅವರಿಗೆ ಏನು ಅನ್ಯಾಯ ಮಾಡಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಚುನಾವಣೆಯಲ್ಲಿ ಒಬ್ಬರ ವಿರುದ್ಧವಾಗಿ ಸ್ಫರ್ಧೆ ಮಾಡಿದರೆ ಅದು ದ್ವೇಷ ಎಂದು ಅರ್ಥನಾ? ಚುನಾವಣೆ ಎಂದಮೇಲೆ ಅದು ಸ್ಪರ್ಧೆ. ಅದರಲ್ಲಿ ನಿಮಗೂ ಹಕ್ಕಿದೆ, ನನಗೂ ಹಕ್ಕಿದೆ ಎಂದರು.
ಚುನಾವಣೆ ಅಂದಮೇಲೆ ಅವರ ಮಗನೇ ಆಗಲಿ, ಅವರೇ ಆಗಲಿ ಅಥವಾ ಅವರ ಶ್ರೀಮತಿಯೇ ಆಗಲಿ ಯಾರೇ ಬಂದರೂ ವಿರೋಧ ಮಾಡುವವರು ಇದ್ದೇ ಇರುತ್ತಾರೆ. ಇಲ್ಲಿಯವರೆಗೆ ಏನಾಗಿದೆ ಎಂದರೆ ರಾಜಕಾರಣದಲ್ಲಿ ಯಾವ ಅಭ್ಯರ್ಥಿಗಳೂ ಅವರನ್ನು ಎದುರಿಸಿ ನಿಲ್ಲುತ್ತಿರಲಿಲ್ಲ. ಈಗ ಅದು ಆಗುತ್ತಿದೆ ಎಂಬ ವಿಷಯವನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಹರಿಹಾಯ್ದರು.
ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಮ್ ಅವರಿಗೆ 20 ವರ್ಷಗಳಿಂದ ಜೆಡಿಎಸ್ ಪಕ್ಷದಿಂದ ಅನ್ಯಾಯವಾಗುತ್ತಾ ಬಂದಿದೆ. ಎಸ್.ಡಿ ಜಯರಾಮ್ ಅಂತಹ ನಾಯಕರು ಜೆಡಿಎಸ್ ಪಕ್ಷವನ್ನು ಬೆಳೆಸಿದಂತಹ ನಾಯಕರು. ಅವರ ಕುಟುಂಬಕ್ಕೆ ಮೊದಲಿನಿಂದಲೂ ಅನ್ಯಾಯ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.