ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ಅವರ ಅಶ್ಲೀಲ ವಿಡಿಯೋ ಪ್ರಕರಣವು ಎಚ್‌ಡಿ ಕುಮಾಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ ಚುನಾವಣೆಗೂ ಮುಂಚೆನೇ ತಿಳಿದಿತ್ತು. ಇದೀಗ ಪ್ರಕರಣದಿಂದ ನುಣುಚಿಕೊಳ್ಳಲು ಡಿಕೆಶಿ ಹಾಗೂ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿದರು.
ಇಂದು ಮಾಧ್ಯಮದವರ ಜತೆ ಮಾತನಾಡಿದ ಅವರು, ಡಿಕೆಶಿ ಬಳಿ ಪೆನ್‌ಡ್ರೈವ ಇರುತ್ತಿದ್ದರೆ ಅವರು ಇನ್ನೂ ಮುಂಚಿತವಾಗಿಯೇ ಬಿಡುಗಡೆ ಮಾಡಬಹುದಿತ್ತಲ್ಲವೇ? ಪೆನ್ ಡ್ರೈವ್ ಹಾಸನ ಜಿಲ್ಲೆಯಲ್ಲಿ ಬಿಡುಗಡೆಯಾಗಿದ್ದು, ಅಲ್ಲಿಯ ನಾಯಕರ ಕೈವಾಡ ಅದರಲ್ಲಿದೆ. ಮೈತ್ರಿಕೂಟದ ನಾಯಕರು ಹಾಗೂ ಕುಮಾರಸ್ವಾಮಿ ಅವರ ಕೈವಾಡವಿದೆ ಎಂದು ಆರೋಪಿಸಿದರು.
ಇನ್ನು ಈ ವಿಡಿಯೋಗಳು ನಾಲ್ಕು ವರ್ಷದ ಹಿಂದಿನದ್ದು ಎಂದು ಎಚ್ ಡಿ ರೇವಣ್ಣನವೇ ಹೇಳಿದ್ದು, ಬೇರೆಯವರ ಮೇಲೆ ಯಾಕೆ ಆರೋಪ ಮಾಡಬೇಕು ಎಂದು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಐನೂರಕ್ಕಿಂತ ಹೆಚ್ಚು ಸಂತ್ರಸ್ತೆಯರಿಗೆ ರಕ್ಷಣೆ, ನ್ಯಾಯ ಒದಗಿಸುವುದು ಮುಖ್ಯವೋ, ಅಥವಾ ಕುಮಾರಸ್ವಾಮಿ ಅವರ ಆರೋಪ ಮುಖ್ಯವೋ. ತಮ್ಮ ಹುಳುಕು ಮುಚ್ಚಿಕೊಳ್ಳಲು ದಿನಾ ಒಂದೊಂದು ಹೇಳಿಕೆ ನೀಡುತ್ತಲೇ ಇರುತ್ತಾರೆ ಎಂದರು.