ಬೆಂಗಳೂರು: ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಲಾರಿ ಮಾಲಿಕರ ಸಂಘ ಮುಷ್ಕರಕ್ಕೆ ಮುಂದಾಗಿದ್ದು ನಾಳೆ ತೀರ್ಮಾನವಾಗಲಿದೆ. ಇದರಿಂದಾಗಿ ಜನ ಮತ್ತೊಂದು ಬೆಲೆ ಏರಿಕೆಗೆ ಸಿದ್ಧವಾಗಬೇಕು.
ಮೊನ್ನೆಯಷ್ಟೇ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಸುಂಕ ಏರಿಸಿದ್ದರಿಂದ 2 ರೂ. ಹೆಚ್ಚಳವಾಗಿತ್ತು. ಡೀಸೆಲ್ ಬೆಲೆ ಹೆಚ್ಚಳದ ಪರಿಣಾಮ ವಿಶೇಷವಾಗಿ ಲಾರಿ ಮಾಲಿಕರಿಗೆ ತಟ್ಟಿದೆ. ಅದರಲ್ಲೂ ಸರಕು ಸಾಗಣೆ ಲಾರಿಗಳು ಸಂಕಷ್ಟಕ್ಕೀಡಾಗಿದೆ.
ಡೀಸೆಲ್ ಬೆಲೆ ಹೆಚ್ಚಳವಾಗಿರುವುದರಿಂದ ನಮಗೆ ದೊಡ್ಡ ಹೊಡೆತವಾಗಿದೆ ಎಂದು ಲಾರಿ ಮಾಲಿಕರು ನಾಳೆ ಸಭೆ ನಡೆಸಲು ತೀರ್ಮಾನಿಸಿದ್ದು ಈ ಸಭೆಯಲ್ಲಿ ಮುಷ್ಕರದ ಬಗ್ಗೆ ತೀರ್ಮಾನ ಮಾಡಲಿದ್ದಾರೆ. ಮೂಲಗಳ ಪ್ರಕಾರ ಮುಂದಿನ ವಾರದಲ್ಲೇ ಅನಿರ್ದಿಷ್ಟಾವಧಿ ಲಾರಿ ಮುಷ್ಕರವಾಗಲಿದೆ.
ಹೀಗಾದಲ್ಲಿ ಮತ್ತೊಂದು ಬೆಲೆ ಏರಿಕೆ ಗ್ಯಾರಂಟಿ. ಲಾರಿ ಮುಷ್ಕರವಾದಲ್ಲಿ ದಿನಸಿ ಸಾಮಗ್ರಿಗಳ ಬೆಲೆ ಏರಿಕೆಯಾಗುವುದು ಖಂಡಿತಾ. ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಕೊರತೆಯಿಂದಾಗಿ ಬೆಲೆ ಏರಿಕೆ ಆಗಲಿದೆ.