ಕಳೆದ ಏಳು ವರ್ಷಗಳ ಹಿಂದೆ ಹಾಸನದಿಂದ ಬೆಂಗಳೂರಿಗೆ ಬಂದಿದ್ದ ರಾಘವೇಂದ್ರ ಟಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ದುಡಿದ ಹಣದಲ್ಲಿ ಒಂದು ಕಾರ್ ಕೂಡ ಕೊಂಡಿದ್ದ. ಒಂದು ವರ್ಷದ ಹಿಂದೆ ಆತನಿಗೆ ಅನು ಎಂಬ ಯುವತಿಯ ಜತೆ ಪ್ರೀತಿಯಾಗಿತ್ತು. ಅತಿಯಾಗಿ ಹಚ್ಚಿಕೊಂಡಿದ್ದ ಅವರು ಮದುವೆ ಮಾಡಿಕೊಳ್ಳಲು ನಿಶ್ಚಯಿಸಿದ್ದರು. ರಾಘವೇಂದ್ರ ಮನೆಯಲ್ಲಿ ಸಹ ಇದಕ್ಕೆ ಒಪ್ಪಿಗೆ ಇತ್ತು. ಆದರೆ ಅನು ಮನೆಯವರಿಗೆ ಅದು ಇಷ್ಟವಿರಲಿಲ್ಲ. ಕಾರ್ ಚಾಲಕನಿಗೆ ಉಪನ್ಯಾಸಕಿ ಆಗಿರುವ ಮಗಳನ್ನು ಮದುವೆ ಮಾಡಿಸಿದರೆ ಕೌಟುಂಬಿಕ ಸ್ಥಾನಮಾನಕ್ಕೆ ಧಕ್ಕೆಯಾಗುತ್ತದೆ ಎಂಬುದು ಅವರ ಯೋಚನೆಯಾಗಿತ್ತು. ಹೀಗಾಗಿ ಮಗಳಿಗೆ ಕೆಲ ತಿಂಗಳ ಹಿಂದೆ ಪ್ರಶಾಂತ್ ಎಂಬುವನ ಜತೆ ಮದುವೆ ನಿಶ್ಚಯಿಸಿದ್ದರು. ಇದರಿಂದ ನೊಂದ ಪ್ರೇಮಿ ರಾಘವೇಂದ್ರ ಆತ್ಮಹತ್ಯೆಗೆ ಶರಣಾಗಿದ್ದ. ಪ್ರೇಮಿ ಕೊನೆಯುಸಿರೆಳೆದನೆಂದು ಅನು ಕೂಡ ಸಾವಿಗೆ ಶರಣಾಗಿದ್ದಾಳೆ. ಸಾವಿಗೆ ಮುನ್ನ ರಾಘವೇಂದ್ರ ನಾಲ್ಕು ಪುಟುಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ.