ಕಾವೇರಿ ವಿಚಾರದಲ್ಲಿ ಉಭಯ ರಾಜ್ಯ ಸರಕಾರ ಚೆಲ್ಲಾಟ: ಜಿ.ಮಾದೇಗೌಡ

ಮಂಗಳವಾರ, 13 ಸೆಪ್ಟಂಬರ್ 2016 (10:13 IST)
ಕಾವೇರಿ ವಿಚಾರದಲ್ಲಿ ತಮಿಳುನಾಡು ಸಿಎಂ ಜಯಲಲಿತಾ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯ ಸರಕಾರ ರೈತರ ಹಿತವನ್ನು ಮರೆತು ತಮಿಳುನಾಡಿಗೆ ನೀರು ಹರಿಸುತ್ತಿದೆ. ಇವೆರಡು ಸರಕಾರ ಜನರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಗುಡುಗಿದರು. 
 
 
ಮಂಡ್ಯ ಜಿಲ್ಲೆಯ ಸರ್ ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಮಾಲ್ಗೊಂಡು ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕನ್ನಡಿಗರ ಮೇಲೆ ದೌರ್ಜನ್ಯ ಎಸಗುತ್ತಿರುವ ತಮಿಳುನಾಡು ಸರಕಾರ ಮತ್ತು ಕಾವೇರಿ ನೀರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅಸಮರ್ಥವಾಗಿರುವ ಕರ್ನಾಟಕ ಸರಕಾರಗಳೆರಡು ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಕೂಡಲೇ ಈ ಎರಡು ಸರಕಾರವನ್ನು ವಜೈಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
 
ನ್ಯಾಯಾಧೀಕರಣದ ಆದೇಶವನ್ನು ಪಾಲಿಸುವಂತೆ ಮಾತ್ರ ಕೋರ್ಟ್‌ಗಳು ಹೇಳುತ್ತವೆ. ಕಾವೇರಿ ವಿಚಾರದಲ್ಲಿ ನ್ಯಾಯಾಧೀಕರಣದಿಂದ ರಾಜ್ಯಕ್ಕೆ ಎಂದಿಗೂ ನ್ಯಾಯ ಸಿಗುವುದಿಲ್ಲ. ಪ್ರತಿ ತಿಂಗಳು ಇಂತಿಷ್ಟು ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚಿಸಿರುವ ಕೋರ್ಟ್ ಆದೇಶವನ್ನು ಬದಲಿಸುವಂತೆ ಒತ್ತಾಯಿಸಿ ಹೋರಾಟ ನಡೆಸಬೇಕಿದೆ ಎಂದು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ