ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದ ಪುಟ್ಟನಂಜಪ್ಪ (85) ಎಂಬವರು ಇಂದು ದೈವಾಧೀನರಾಗಿದ್ದು ಇವರು 20 ವರ್ಷಗಳ ಹಿಂದೆಯೇ ತಮ್ಮ ಜಮೀನಿನಲ್ಲಿ ತಾವೇ ಕುಳಿತು ಅಳತೆ ಮಾಡಿ ಗೋಪುರ ಶೈಲಿಯ ಸಮಾಧಿಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಜೊತೆಗೆ, ಅಂತ್ಯ ಸಂಸ್ಕಾರಕ್ಕೆ ಬೇಕಾದ ವಿಭೂತಿ, ಕಳಶಗಳು, ಒಂದು ಲಕ್ಷ ರೂ.ನ್ನೂ ಎತ್ತಿಟ್ಟಿದ್ದು, ಆ ಹಣದಲ್ಲೇ ಅಂತ್ಯಕ್ರಿಯೆ ನೆರವೇರುತ್ತಿದೆ.ಪುಟ್ಟಮಲ್ಲಪ್ಪ ಅವರು ಸಾಕಷ್ಟು ಸ್ಥಿತಿವಂತರೇ ಆಗಿದ್ದು ಮೂರು ಪುತ್ರರಿದ್ದಾರೆ.ತನ್ನ ತಿಥಿಯನ್ನು ತನ್ನ ಹಣದಲ್ಲೇ ಮಾಡಬೇಕೆಂಬ ಸ್ವಾಭಿಮಾನದಿಂದಾಗಿ ಸಮಾಧಿ ನಿರ್ಮಾಣ ಹಾಗೂ ಹಣ ಎತ್ತಿಟ್ಟಿದ್ದರು ಎಂದು ಕುಟುಂಬಸ್ಥರು ತಿಳಿಸಿದರು.
ಮೃತಪಟ್ಟ ಬಳಿಕ ಸಮಾಧಿ ನಿರ್ಮಾಣ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ತಾನು ಯಾರಿಗೂ ತೊಂದರೆ ಕೊಡಬಾರದು, ತಾನು ದುಡಿದ ಹಣದಲ್ಲೇ ತನ್ನ ಅಂತಿಮ ವಿಧಿ-ವಿಧಾನ ನೆರವೇರಬೇಕೆಂದು ಇಚ್ಚಿಸಿ 20 ವರ್ಷಗಳ ಹಿಂದೆಯೇ ಸಮಾಧಿ ನಿರ್ಮಿಸಿಕೊಂಡಿದ್ದು ಅಲ್ಲೇ ಇಂದು ಅಂತಿಮ ವಿಧಿ ವಿಧಾನ ನೆರವೇರುತ್ತಿದೆ.
ಪುಟ್ಟಮಲ್ಲಪ್ಪ ಅವರ ಪತ್ನಿ ಕಳೆದ ವರ್ಷ ಕೊರೊನಾದಲ್ಲಿ ಮೃತಪಟ್ಟಿದ್ದು ಅವರ ಅಂತ್ಯ ಸಂಸ್ಕಾರವನ್ನು ಮಕ್ಕಳಿಂದ ಹಣ ಪಡೆಯದೇ ತಾವೇ ನೆರವೇರಿಸಿದ್ದರು.ಅಂತ್ಯಸಂಸ್ಕಾರಕ್ಕೆ ಬೇಕಾದ ಪ್ರತಿಯೊಂದನ್ನು ತಂದಿಟ್ಟಿದ್ದರು.ಕಳೆದ 12 ದಿನಗಳಿಂದ ಅವರ ಆರೋಗ್ಯ ಹದಗೆಟ್ಟು 5 ದಿನಗಳಿಂದ ಮಾತು ನಿಂತಿತ್ತು, ಭಾನುವಾರ ಸಂಜೆ ತಂದೆಯವರು ಅಸುನೀಗಿದ್ದು ಇಂದು ಅವರು ನಿರ್ಮಿಸಿಕೊಂಡ ಸಮಾಧಿಯಲ್ಲೇ, ಅವರು ಎತ್ತಿಟ್ಟಿದ್ದ ಹಣದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ ಎಂದು ಪುತ್ರ ಗೌಡಿಕೆ ನಾಗೇಶ್ ತಿಳಿಸಿದರು...