ಮುಂಬೈನ ಜೆಜೆ ಆಸ್ಪತ್ರೆಯಲ್ಲಿ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಳು. ಇದರಿಂದ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ವಿಷಯ ತಿಳಿಸಿದ್ದರು.ಸಮಾಜದಲ್ಲಿ ಎಷ್ಟೇ ಹೊಸ ಕಾನೂನುಗಳನ್ನು ಜಾರಿಗೆ ತರುತ್ತಿದ್ದರೂ ಅಪರಾಧ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ. ಮಹಾರಾಷ್ಟ್ರದ ಮುಂಬೈನ 15 ವರ್ಷದ ಹುಡುಗಿಯನ್ನು ಮದುವೆಯಾಗಿ, ಹಲವಾರು ಬಾರಿ ಅತ್ಯಾಚಾರ ಮಾಡಿದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆ 15 ವರ್ಷದ ಬಾಲಕಿ ಮಗುವಿಗೆ ಜನ್ಮವನ್ನೂ ನೀಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿ, ಆರೋಪಿ ಯುವಕನ ಪೋಷಕರು ಮತ್ತು ವಿವಾಹವನ್ನು ನೆರವೇರಿಸಿದ ಧರ್ಮಗುರುಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮುಂಬೈನ ಜೆಜೆ ಆಸ್ಪತ್ರೆಯಲ್ಲಿ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಳು. ಇದರಿಂದ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರ ಪ್ರಕಾರ ಜನವರಿಯಲ್ಲಿ ಬಾಲ್ಯ ವಿವಾಹ ನಿಶ್ಚಯವಾಗಿತ್ತು. “ಮಗುವಿಗೆ ಜನ್ಮ ನೀಡುವ ಮೊದಲು, ಆಸ್ಪತ್ರೆಯ ವೈದ್ಯರು ಆ ಬಾಲಕಿಯ ವಯಸ್ಸು ಎಷ್ಟೆಂದು ಆಕೆಯ ಗಂಡ ಮತ್ತು ಅತ್ತೆಯನ್ನು ಕೇಳಿದಾಗ ಅವರು ಆಕೆಗೆ 20 ವರ್ಷ ವಯಸ್ಸಾಗಿದೆ ಎಂದು ಸುಳ್ಳು ಹೇಳಿದ್ದರು” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.ಆದರೆ, ವೈದ್ಯರು 15 ವರ್ಷದ ಬಾಲಕಿಯ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿದಾಗ ಆಕೆಯ ನಿಜವಾದ ವಯಸ್ಸು ಬಹಿರಂಗವಾಯಿತು. ಅದರಲ್ಲಿ ಅವಳು 2006ರ ಜೂನ್ ತಿಂಗಳಲ್ಲಿ ಜನಿಸಿದಳು ಎಂದು ಗೊತ್ತಾಯಿತು. ವೈದ್ಯರು ತಕ್ಷಣವೇ ಅಗ್ರಿಪಾದ ಪೊಲೀಸರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಭಾನುವಾರ ಪ್ರಕರಣ ದಾಖಲಿಸಲಾಗಿದೆ.
ಆ ಬಾಲಕಿಯ ಮನೆಯಲ್ಲಿ ತೀವ್ರವಾದ ಆರ್ಥಿಕ ಸಂಕಷ್ಟಗಳು ಇದ್ದುದರಿಂದ ಕಳೆದ ವರ್ಷದ ಕೊನೆಯಲ್ಲಿ ಬಾಲಕಿಯ ತಾಯಿ ತನ್ನ ಮಗಳ ಓದನ್ನು ಅರ್ಧಕ್ಕೆ ನಿಲ್ಲಿಸಿ ಯುವಕನೊಂದಿಗೆ ಮದುವೆ ಮಾಡಿದ್ದಳು. ಆ ಬಾಲಕಿ ಐದನೇ ತರಗತಿಯವರೆಗೆ ಓದಿದ್ದಾಳೆ. ಆಕೆಯ ಗಂಡ ಮತ್ತು ಅವನ ಹೆತ್ತವರಿಗೆ ಅವಳು ಅಪ್ರಾಪ್ತಳಾಗಿದ್ದಾಳೆಂದು ತಿಳಿದಿದ್ದರೂ ಮದುವೆ ಮಾಡಿಕೊಂಡ ಕಾರಣ ಪ್ರಕರಣದಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ” ಎಂದು ಅಧಿಕಾರಿ ಹೇಳಿದ್ದಾರೆ.
ಜನವರಿಯಲ್ಲಿ ನಡೆದ ಮದುವೆಯ ನಂತರ ಬಾಲಕಿಯು ಆ ವ್ಯಕ್ತಿಯ ಮನೆಯಲ್ಲಿ ವಾಸ ಮಾಡಲು ಪ್ರಾರಂಭಿಸಿದಾಗ ಪದೇ ಪದೇ ಗಂಡನಿಂದ ಅತ್ಯಾಚಾರಕ್ಕೊಳಗಾಗಿದ್ದಳು. ಹುಡುಗಿಯ ತಾಯಿ, ಆ ಯುವಕ ಮತ್ತು ಧರ್ಮಗುರುಗಳ ಸಮ್ಮುಖದಲ್ಲಿ ವಿವಾಹವನ್ನು ನೆರವೇರಿಸಲಾಯಿತು. ಅವಳು ಗರ್ಭಧರಿಸಿದ ನಂತರ, ಅವಳನ್ನು ಜೆಜೆ ಆಸ್ಪತ್ರೆಗೆ ತಪಾಸಣೆಗಾಗಿ ಹಲವಾರು ಬಾರಿ ಕರೆದೊಯ್ಯಲಾಯಿತು. ಆದರೆ ಅವರು ಯಾವಾಗಲೂ ಅವಳಿಗೆ 20 ವರ್ಷವಾಗಿದೆ ಎಂದು ಸುಳ್ಳು ಹೇಳುತ್ತಿದ್ದರು” ಎಂದು ಅಧಿಕಾರಿ ಹೇಳಿದ್ದಾರೆ.