ಫೆ.7 ರಿಂದ ರಾಜ್ಯದಲ್ಲಿ ದಡಾರ, ರುಬೆಲ್ಲಾ ಲಸಿಕೆ ಕಾರ್ಯಕ್ರಮ

ಬುಧವಾರ, 25 ಜನವರಿ 2017 (12:35 IST)
ಫೆಬ್ರವರಿ 7 ರಿಂದ 28 ರವರೆಗೆ ರಾಜ್ಯಾದ್ಯಂತ 9 ತಿಂಗಳಿಂದ 15 ನೇ ವರ್ಷದವರೆಗಿನ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಕಾಯಿಲೆಗಳನ್ನು ತಡೆಗಟ್ಟುವ ಲಸಿಕೆಗಳನ್ನು ಹಾಕಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
 
1.65ಕೋಟಿ ಮಕ್ಕಳಿಗೆ ಲಸಿಕೆ: ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಈ ಸಂಬಂಧ ಇಂದು ನಡೆದ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ತನ್ವೀರ್ ಸೇಠ್ ಅವರು ನಮ್ಮ ರಾಜ್ಯದಲ್ಲಿ 9 ತಿಂಗಳಿಂದ 15 ವರ್ಷದ ಒಳಗಿನ ಮಕ್ಕಳ ಸಂಖ್ಯೆ 1.65 ಕೋಟಿ ಇದ್ದು ಈ ಎಲ್ಲಾ ಮಕ್ಕಳಿಗೂ ಪ್ರಥಮ ಹಾಗೂ ದ್ವಿತೀಯ ಹಂತಗಳಲ್ಲಿ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.
 
ದಡಾರ ಲಸಿಕೆ: ವಿಶ್ವಸಂಸ್ಥೆಯು ಎಲ್ಲಾ ದೇಶಗಳಲ್ಲೂ ಆರೋಗ್ಯ ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೆಲವು ಯೋಜನೆಗಳನ್ನು ರೂಪಿಸುತ್ತಿದ್ದು ದಡಾರ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಅದರಂತೆ ರಾಜ್ಯದಲ್ಲಿ ಈ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆರೋಗ್ಯ ಸಚಿವ ರಮೇಶ್‍ಕುಮಾರ್ ಅವರು ತಿಳಿಸಿದರು.
 
ವಿಶ್ವ ಆರೋಗ್ಯ ಸಂಸ್ಥೆ ಭಾರತದ ಐದು ರಾಜ್ಯಗಳನ್ನು ಆಯ್ಕೆ ಮಾಡಿದ್ದು ನಮ್ಮ ಕರ್ನಾಟಕವು ಅದರಲ್ಲಿ ಸೇರಿದೆ, ರಾಜ್ಯ ಸರ್ಕಾರ, ವಿಶ್ವ ಆರೋಗ್ಯ ಸಂಸ್ಥೆ, ರಾಷ್ಟ್ರೀಯ ಆರೋಗ್ಯ ಮಿಷನ್ ಹಾಗೂ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಈ ಅಭಿಯಾನ ನಡೆಯಲಿದೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಟ್ ಅವರು ಹೇಳಿದರು. ಒಮ್ಮೆ ಲಸಿಕೆ ಹಾಕಿಸಿಕೊಂಡ ಮಕ್ಕಳಿಗೂ ಮತ್ತೊಮ್ಮೆ ಲಸಿಕೆ ಹಾಕಿಸಬಹುದು ಲಸಿಕೆ ಹಾಕಿಸಿಕೊಂಡ ಮೇಲೆ ಮಕ್ಕಳಲ್ಲಿ ಸ್ವಲ್ಪ ಜ್ವರ ಹಾಗೂ ವಾಂತಿ ಕಾಣಿಸಿಕೊಳ್ಳಬಹುದು. ಆದರೆ ಅದಕ್ಕೆ ಹೆದರುವ ಅಗತ್ಯ ಇಲ್ಲ ಎಂದು ಸಚಿವರು ತಿಳಿಸಿದರು.
 
ಪೊಲಿಯೋ ನಿರ್ಮೂಲನೆ: ಪ್ರತಿ ಶಾಲೆಗಳಲ್ಲಿ, ಅಂಗನವಾಗಿ ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕಾ ಕೇಂದ್ರಗಳನ್ನು ಪ್ರಾರಂಭಿಸಿ ಲಸಿಕೆ ಹಾಕಲಾಗುವುದು ಎಂದ ಸಚಿವರು ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ದೇಶದಲ್ಲಿ ಪೊಲಿಯೋ ನಿರ್ಮೂಲನೆ ಮಾಡಿದಂತೆ ಈ ಕಾಯಿಲೆಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಸಚಿವ ತನ್ವೀರ್ ಸೇಠ್ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ