ಬೆಂಗಳೂರು: ಮಹಿಳೆಯರಿಗೆ ನೀಡಲಾಗುತ್ತಿರುವ ಶಕ್ತಿ ಯೋಜನೆ ಫ್ರೀ ಬಸ್ ಯೋಗ ಇನ್ನು ಮುಂದೆ ಗಂಡಸರಿಗೂ ವಿಸ್ತರಣೆಯಾಗಲಿದೆ. ಈ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ.
ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಮಕ್ಕಳ ಜೊತೆಗೆ ಸಂವಾದದಲ್ಲಿ ಪಾಲ್ಗೊಂಡಿದ್ದಾಗ ಬಾಲಕನೊಬ್ಬ ನಮಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡಿ ಎಂದು ಕೇಳಿದ್ದಾನೆ. ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಯೋಚನೆ ಮಾಡುವುದಾಗಿ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಮಾಡಿದೆ. ಇದರಿಂದ ಹಲವು ಮಹಿಳೆಯರಿಗೆ ಪ್ರಯೋಜನವಾಗುತ್ತಿದೆ. ಹೀಗಾಗಿ ಪುರುಷರೂ ನಾವೇನು ಪಾಪ ಮಾಡಿದ್ವಿ ನಮಗೂ ಈ ಯೋಜನೆ ವಿಸ್ತರಿಸಿ ಎಂದು ಬೇಡಿಕೆಯಿಡುತ್ತಲೇ ಇದ್ದರು. ಇದೀಗ ಮಕ್ಕಳ ಬೇಡಿಕೆಗೆ ಡಿಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಆದರೆ ಎಲ್ಲಾ ಪುರುಷರಿಗೂ ಈ ಯೋಜನೆ ಸಿಗಲ್ಲ. ಒಂದು ನಿರ್ದಿಷ್ಟ ವಯೋಮಿತಿಯ ಹುಡುಗರಿಗೆ ಮಾತ್ರ ಯೋಜನೆ ವಿಸ್ತರಣೆಯಾಗುವ ಸಾಧ್ಯತೆಯಿದೆ. ಇದರ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಬಹುದು. ಹೀಗಾಗಿ ಸದ್ಯದಲ್ಲೇ ಹುಡುಗರಿಗೂ ಉಚಿತ ಬಸ್ ಸೌಲಭ್ಯ ಸಿಗಬಹುದು.